ತಿರುವನಂತಪುರಂ: ಕೇರಳ-ಕರ್ನಾಟಕ ಗಡಿಯ ಬಳಿಯ ವಯನಾಡಿನಲ್ಲಿ ವಾಹನ ತಪಾಸಣೆ ವೇಳೆ ಭಾರಿ ಪ್ರಮಾಣದ ನಗದು ಪತ್ತೆಯಾಗಿದ್ದು, ಪೊಲೀಸರು ₹1.44 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿನ ಚಾಲಕನ ಸೀಟಿನ ಕೆಳಗೆ ಬಚ್ಚಿಟ್ಟಿದ್ದ ನಗದು ಬಂಡಲ್‌ಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಪರಿಶೀಲನೆ ವೇಳೆ ಒಟ್ಟು ₹1,44,50,000 ನಗದು ಪತ್ತೆಯಾಗಿದ್ದು, ಅದನ್ನು ಪೊಲೀಸರು ಸೀಜ್ ಮಾಡಿದ್ದಾರೆ.



ಕಾರಿನಲ್ಲಿ ಮೂವರು ಪ್ರಯಾಣ

ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರನ್ನು ಕೋಝಿಕ್ಕೋಡ್‌ನ ವಡಕರ ನಡಕ್ಕಾವು ಸ್ಟ್ರೀಟ್‌ನ ಪ್ರಭು ರಾಜ್ (20), ಕಣ್ಣೂರಿನ ಪಾನೂರಿನ ಸ್ವಪ್ನಿಲ್ (23) ಹಾಗೂ ಮಹಾರಾಷ್ಟ್ರ ಮೂಲದ ರಾಹುಲ್ (26) ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಯಾರದ್ದು? ತನಿಖೆ ಚುರುಕು

ವಶಪಡಿಸಿಕೊಂಡಿರುವ ಭಾರಿ ಮೊತ್ತದ ಹಣ ಯಾರದ್ದು, ಎಲ್ಲಿಂದ ತರಲಾಗಿತ್ತು, ಎಲ್ಲಿಗೆ ಸಾಗಿಸಲಾಗುತ್ತಿತ್ತು ಹಾಗೂ ಯಾರಿಗೆ ನೀಡಲು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಹಾಗೂ ಹಣದ ಮೂಲದ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ಪೊಲೀಸರು ಮತ್ತು DANSAF ತಂಡದ ಕಾರ್ಯಾಚರಣೆ

ಈ ಕಾರ್ಯಾಚರಣೆಯನ್ನು ಪೊಲೀಸರು ಹಾಗೂ DANSAF ತಂಡ ಜಂಟಿಯಾಗಿ ನಡೆಸಿದೆ. ವಾಹನ ತಪಾಸಣೆ ವೇಳೆ ಸಿಕ್ಕಿಬಿದ್ದಿರುವ ₹1.44 ಕೋಟಿ ನಗದು ಪ್ರಕರಣ ಇದೀಗ ಹೆಚ್ಚಿನ ತನಿಖೆಗೆ ಒಳಪಟ್ಟಿದೆ.