ಮುಂಬೈನ ಕೋಸ್ಟಲ್ ರೋಡ್‌ನಲ್ಲಿ ವೇಗವಾಗಿ ಬಂದ BMW ಕಾರು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ.

ಮುಂಬೈ: ಮುಂಬೈನ ಕೋಸ್ಟಲ್ ರೋಡ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, BMW ಕಾರು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಭಾನುವಾರ ಮುಂಜಾನೆ ಮರೈನ್ ಡ್ರೈವ್‌ನಿಂದ ಹಾಜಿ ಅಲಿ ಕಡೆಗೆ BMW ಕಾರು ವೇಗವಾಗಿ ಸಂಚರಿಸುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮೊದಲು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಬಳಿಕ ಕೆಳಗೆ ಬಿದ್ದಿದೆ.

ಅಪಘಾತದ ಬಳಿಕ ಕಾರಿನಲ್ಲಿದ್ದ ನಾಲ್ವರನ್ನು ನಾಯರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತರಲ್ಲಿ 21 ವರ್ಷದ ಶನಾಯ್ ಗಜ್ಜಲ್, 17 ವರ್ಷದ ಧಿರ್ಯಾ ಸೇಠ್ ಹಾಗೂ 25 ವರ್ಷದ ಗುರುತು ಪತ್ತೆಯಾಗದ ಯುವಕ ಸೇರಿದ್ದಾರೆ. ಮತ್ತೊಬ್ಬ 20 ವರ್ಷದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಭಾನುವಾರ ಬೆಳಗ್ಗೆ ಸುಮಾರು 5:20ಕ್ಕೆ ಅಪಘಾತದ ಮಾಹಿತಿ ಕೋಸ್ಟಲ್ ರೋಡ್ ಕಂಟ್ರೋಲ್ ರೂಮ್‌ಗೆ ಲಭ್ಯವಾಗಿತ್ತು. ಅಪಘಾತದ ಪರಿಣಾಮ ಕಾರಿನ ಮೇಲ್ಛಾವಣಿ ಕುಸಿದಿದ್ದು, ವಿಂಡ್‌ಶೀಲ್ಡ್ ಒಡೆದುಹೋಗಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.