ನಾಡಿನಾದ್ಯಂತ ಇಂದು ಬೃಂದಾವನದ ನಂದನ ಶ್ರೀಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿರುವ ಶ್ರೀಕೃಷ್ಣನ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.


ಬೆಂಗಳೂರಿನ ಪ್ರಸಿದ್ಧ ಇಸ್ಕಾನ್ ದೇವಾಲಯದಲ್ಲೂ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಮುಖ್ಯ ಮಂದಿರವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಬೃಂದಾವನದ ತಂಡದಿಂದ ನವಿಲಿನ ಅಲಂಕಾರ ಮಾಡಲಾಗಿದೆ.


ಇನ್ನು ರಂಗಮಂದಿರದಲ್ಲಿ ರಾಧಾ-ಕೃಷ್ಣ ಉತ್ಸವ ಮೂರ್ತಿಗಳಿಗೆ ವಿಶೇಷ 108 ಬಗೆಯ ಜಲಾಮೃತ ಅಭಿಷೇಕ ನೆರವೇರಿಸಲಾಗುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆಯುತ್ತಿದ್ದಾರೆ.


ಇಂದು ರಾತ್ರಿ 12 ಗಂಟೆಯವರೆಗೆ ಭಕ್ತರಿಗೆ ದರ್ಶನದ ವ್ಯವಸ್ಥೆ ಇರಲಿದೆ. ಅಂದಾಜಿನ ಪ್ರಕಾರ 2ರಿಂದ 3 ಲಕ್ಷ ಭಕ್ತರು ಶ್ರೀಕೃಷ್ಣನ ದರ್ಶನ ಪಡೆಯುವ ನಿರೀಕ್ಷೆಯಿದೆ.

ರಾಜ್ಯದ ವಿವಿಧ ಶ್ರೀಕೃಷ್ಣ ದೇವಾಲಯಗಳಲ್ಲೂ ಭಜನೆ, ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನ್ಮಾಷ್ಟಮಿಯನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ.