ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ KRS ಜಲಾಶಯದ ನೀರಿನ ಮಟ್ಟ 3 ದಿನದಲ್ಲಿ 3 ಅಡಿ ಕುಸಿದಿದೆ. 111 ಅಡಿಯಷ್ಟಿದ್ದ ನೀರಿನ ಮಟ್ಟ ಇದೀಗ 108 ಅಡಿಗೆ ಇಳಿಕೆಯಾಗಿದೆ.
ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಇದರ ಪರಿಣಾಮ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಪ್ರಮಾಣ ವೇಗವಾಗಿ ಕುಸಿಯುತ್ತಿರುವುದು ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಮಳೆ ಕೊರತೆ ಮುಂದುವರಿದಿರುವ ನಡುವೆಯೇ ಕೆಆರ್ಎಸ್ ಜಲಾಶಯದಿಂದ ನದಿಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ಹರಿಸಬೇಕಾದ ನೀರಿನ ಬಹುಪಾಲನ್ನು ಕೆಆರ್ಎಸ್ನಿಂದಲೇ ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಸದ್ಯ ಕೆಆರ್ಎಸ್ನಿಂದ ನದಿಗೆ 9 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ಬಿಡುಗಡೆ ಮಾಡಲಾಗುತ್ತಿದೆ. ನಿರಂತರವಾಗಿ ಈ ಪ್ರಮಾಣದ ನೀರು ಹೊರಹರಿಯುತ್ತಿರುವ ಹಿನ್ನೆಲೆಯಲ್ಲಿ ಕೇವಲ ಮೂರು ದಿನಗಳಲ್ಲಿ ಕೆಆರ್ಎಸ್ನ ನೀರಿನ ಮಟ್ಟ 3 ಅಡಿ ಕುಸಿತ ಕಂಡಿದೆ.
ಕೆಲ ದಿನಗಳ ಹಿಂದೆ ಸುಮಾರು 111 ಅಡಿಯಷ್ಟಿದ್ದ ನೀರಿನ ಮಟ್ಟ ಇದೀಗ 108 ಅಡಿಗೆ ಇಳಿಕೆಯಾಗಿದೆ. ಸದ್ಯ ಹೇಮಾವತಿ ಜಲಾಶಯದಿಂದ ಬಿಡಲಾಗಿರುವ ನೀರು ಕೆಆರ್ಎಸ್ಗೆ ಪ್ರಮುಖ ಒಳಹರಿವಿನ ಆಸರೆಯಾಗಿದೆ.
ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವುದರಿಂದ ಕೆಆರ್ಎಸ್ ಮಾತ್ರವಲ್ಲದೆ ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲೂ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ ಎನ್ನಲಾಗಿದೆ.
ಇನ್ನು ಮಳೆ ಇದೇ ರೀತಿ ಕೈಕೊಟ್ಟರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕವಿದೆ. ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಎದುರಾಗುವುದರ ಜೊತೆಗೆ ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯ ಬಗ್ಗೆಯೂ ಆತಂಕ ವ್ಯಕ್ತವಾಗುತ್ತಿದೆ.