ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ದಿಢೀರ್ ವಿಚಲಿತಗೊಂಡು ಓಡಿದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಆಂತರಿಕ ತನಿಖಾ ವರದಿಯಲ್ಲಿ ಪ್ರಮುಖ ಅಂಶಗಳು ಬಹಿರಂಗವಾಗಿವೆ.
ಶಿವಮೊಗ್ಗ ಸಿಸಿಎಫ್ ಕೆ.ಟಿ. ಹನುಮಂತಪ್ಪ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ, ದಸರಾ ಮೆರವಣಿಗೆಯಲ್ಲಿ ಜನಸ್ತೋಮ ಹೆಚ್ಚಾಗಿದ್ದರಿಂದ ನಡಿಗೆ ನಿಧಾನಗೊಂಡಿತ್ತು. ಈ ವೇಳೆ ಸೋಮಣ್ಣ ಆನೆಯೂ ನಿಧಾನವಾಗಿ ಸಾಗುತ್ತಿತ್ತು.
ಆನೆ ಪಕ್ಕಕ್ಕೆ ತಿರುಗಿದ ಸಂದರ್ಭದಲ್ಲಿ ಹಿಂದೆ ಬರುತ್ತಿದ್ದ ಸಾಗರ ಮತ್ತು ಬಹದ್ದೂರ್ ಆನೆಗಳನ್ನು ಕಂಡು ಆತಂಕಗೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ವಿಚಲಿತಗೊಂಡ ಸೋಮಣ್ಣ ಆನೆ, ಅಂಬಾರಿ ಸಮೇತ ಓಡಿದ್ದರಿಂದ ಮೆರವಣಿಗೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇನ್ನು, ದಸರಾ ಮೆರವಣಿಗೆಗೂ ಮುನ್ನ ಸೋಮಣ್ಣ ಸೇರಿದಂತೆ ಆನೆಗಳಿಗೆ ತಾಲೀಮು ನೀಡಲಾಗಿತ್ತು. ಪಶುವೈದ್ಯರು ಮತ್ತು ಅನುಭವಿ ಸಿಬ್ಬಂದಿಯ ಸಲಹೆಯ ಮೇರೆಗೆ ಸೋಮಣ್ಣನನ್ನು ಅಂಬಾರಿ ಹೊರುವ ಆನೆಯಾಗಿ ಆಯ್ಕೆ ಮಾಡಲಾಗಿತ್ತು ಎನ್ನಲಾಗಿದೆ.
ತನಿಖಾ ವರದಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿಯ ನಿರ್ಲಕ್ಷ್ಯ ಕಂಡುಬಂದಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಈ ಘಟನೆಗೆ ಸಂಬಂಧಿಸಿದಂತೆ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.
ಒಟ್ಟಿನಲ್ಲಿ, ಜನಸ್ತೋಮ, ಮೆರವಣಿಗೆಯ ನಿಧಾನಗತಿ ಹಾಗೂ ಹಿಂದೆ ಬರುತ್ತಿದ್ದ ಆನೆಗಳನ್ನು ಕಂಡು ಸೋಮಣ್ಣ ವಿಚಲಿತಗೊಂಡಿದ್ದೇ ಘಟನೆಗೆ ಕಾರಣ ಎಂದು ತನಿಖಾ ವರದಿ ತಿಳಿಸಿದೆ.