Nelamangala : ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಬಳಿ ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ ಎನ್ನಲಾಗಿದೆ.

 Nelamangala : ಮದುವೆ ಕಾರ್ಯಕ್ರಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನೊಬ್ಬ ಹಿಟ್ ಅಂಡ್ ರನ್ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಬಳಿ ನಡೆದಿದೆ.

ಕೃಷ್ಣ (25) ಮೃತಪಟ್ಟ ಯುವಕ. ಭಾನುವಾರ ರಾತ್ರಿ ಸುಮಾರು 12 ಗಂಟೆಗೆ ಅಪಘಾತ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ವಾಸವಿದ್ದ ಕೃಷ್ಣ, ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆಯಲಿದ್ದ ಚಿಕ್ಕಮ್ಮನ ಮಗಳ ಮದುವೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.

ಈ ವೇಳೆ ತ್ಯಾಮಗೊಂಡ್ಲು ಬಳಿ ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದು ಸ್ಥಳದಿಂದ ತೆರಳಿದೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಕಾವೇರಿ ಎಂಬುವವರನ್ನು ಕೃಷ್ಣ ವಿವಾಹವಾಗಿದ್ದರು.

ಘಟನೆಗೆ ಸಂಬಂಧಿಸಿದಂತೆ ತ್ಯಾಮಗೊಂಡ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ನೆಲಮಂಗಲದ ಶವಾಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ಕಾರಣವಾದ ವಾಹನದ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.