ಮೈಸೂರು ದಸರಾ ವ್ಯವಸ್ಥೆ ಕುರಿತು ಪ್ರಮೋದಾದೇವಿ ಒಡೆಯರ್ ಎತ್ತಿದ್ದ ಆಕ್ಷೇಪಗಳಿಗೆ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮತ್ತು ಡಿಸಿಎಫ್ ಪ್ರಭುಗೌಡ ಸ್ಪಷ್ಟನೆ ನೀಡಿದ್ದಾರೆ.

ಮೈಸೂರು ದಸರಾ ವ್ಯವಸ್ಥೆ ಕುರಿತ ವಿವಾದಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ದಸರಾ ಆಯೋಜನೆಯಲ್ಲಿ ಲೋಪಗಳಾಗಿವೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಪತ್ರದ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ದಸರಾ ಭದ್ರತೆ ಮತ್ತು ಜಟ್ಟಿ ಕಾಳಗದ ವ್ಯವಸ್ಥೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅಂಬಾರಿ ಆನೆ ಆಯ್ಕೆ ವಿಚಾರಕ್ಕೂ ಅರಣ್ಯ ಇಲಾಖೆ ಪ್ರತಿಕ್ರಿಯಿಸಿದೆ.

ದಸರಾ ಸಂದರ್ಭದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು, ವಿದೇಶಿ ರಾಯಭಾರಿಗಳು ಹಾಗೂ ನ್ಯಾಯಾಧೀಶರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಕಳೆದ ಎರಡು ತಿಂಗಳಿಂದ ಸಮನ್ವಯ ಸಭೆಗಳನ್ನು ನಡೆಸಲಾಗಿದ್ದು, ಅರಮನೆ ಆಡಳಿತ ಮಂಡಳಿಯೊಂದಿಗೂ ಚರ್ಚೆ ನಡೆಸಿ ಅಗತ್ಯ ವ್ಯವಸ್ಥೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.


 ಇನ್ನು ಜಟ್ಟಿ ಕಾಳಗದ ವ್ಯವಸ್ಥೆ ವಿಚಾರದಲ್ಲಿಯೂ ಪೊಲೀಸ್ ಇಲಾಖೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಮೂರು ತಂಡಗಳು ನಿಗದಿತ ಸಮಯಕ್ಕೆ ಆಗಮಿಸಿದ್ದವು. ನಾಲ್ಕನೇ ತಂಡ ತಡವಾಗಿ ಬಂದಿದ್ದು, ಅಧಿಕೃತ ಪಾಸ್ ಇಲ್ಲದವರನ್ನೂ ಕರೆತಂದಿತ್ತು ಎಂದು ಪೊಲೀಸ್ ಆಯುಕ್ತರು ನೀಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ.


 ಮತ್ತೊಂದೆಡೆ, ಅಂಬಾರಿ ಹೊರುವ ಆನೆಯ ಆಯ್ಕೆ ಕುರಿತು ರಾಜಮನೆತನಕ್ಕೆ ಮಾಹಿತಿ ನೀಡಿಲ್ಲ ಎಂಬ ಆಕ್ಷೇಪಕ್ಕೆ ಡಿಸಿಎಫ್ ಪ್ರಭುಗೌಡ ಪ್ರತಿಕ್ರಿಯಿಸಿದ್ದಾರೆ. ಆನೆ ಆಯ್ಕೆ ಬಗ್ಗೆ ರಾಜಮನೆತನಕ್ಕೆ ಲಿಖಿತ ಅಥವಾ ಔಪಚಾರಿಕ ಮಾಹಿತಿ ನೀಡುವ ಪದ್ಧತಿ ಇಲ್ಲ ಎಂದು ಅವರು ತಿಳಿಸಿದ್ದಾರೆ. ಆದರೂ ಸಮನ್ವಯದ ದೃಷ್ಟಿಯಿಂದ ಅಕ್ಟೋಬರ್ 11 ಮತ್ತು 12ರಂದು ದೂರವಾಣಿ ಮೂಲಕ ಮಾಹಿತಿ ನೀಡಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

  ಒಟ್ಟಿನಲ್ಲಿ, ಮೈಸೂರು ದಸರಾ ವ್ಯವಸ್ಥೆ ಕುರಿತಂತೆ ರಾಜಮನೆತನದ ಆಕ್ಷೇಪಗಳು ಮತ್ತು ಅಧಿಕಾರಿಗಳ ಸ್ಪಷ್ಟನೆಗಳು ಚರ್ಚೆಗೆ ಗ್ರಾಸವಾಗಿವೆ. ಈ ವಿವಾದಕ್ಕೆ ಮುಂದಿನ ದಿನಗಳಲ್ಲಿ ಯಾವ ತಿರುವು ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.