ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು ಹೆಚ್ಚಿಸಲು ಅದಾನಿ ಏರ್‌ಪೋರ್ಟ್ಸ್ ಪ್ರಸ್ತಾವನೆ ಸಲ್ಲಿಸಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರಿಗೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ವೆಚ್ಚ ಎದುರಾಗುವ ಸಾಧ್ಯತೆಯಿದೆ. ವಿಮಾನ ನಿಲ್ದಾಣದ ಮೂಲಸೌಕರ್ಯ ಅಭಿವೃದ್ಧಿಗಾಗಿ ಬಳಕೆದಾರರ ಅಭಿವೃದ್ಧಿ ಶುಲ್ಕವಾದ UDF ಅನ್ನು ಹೆಚ್ಚಿಸಲು ಅದಾನಿ ಸಮೂಹದ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿದೆ.


ಸುಮಾರು ₹4,200 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗೆ ಹಣ ಹೊಂದಿಸುವ ಉದ್ದೇಶದಿಂದ ಈ ಶುಲ್ಕ ಪರಿಷ್ಕರಣೆಯನ್ನು ಪ್ರಸ್ತಾಪಿಸಲಾಗಿದೆ. ಪ್ರಸ್ತಾವನೆಯ ಪ್ರಕಾರ, 2026ರ ಡಿಸೆಂಬರ್ 1ರಿಂದ ದೇಶೀಯ ನಿರ್ಗಮನದ UDF ಶುಲ್ಕ ₹735ರಿಂದ ₹890ಕ್ಕೆ ಮತ್ತು ಅಂತರರಾಷ್ಟ್ರೀಯ ನಿರ್ಗಮನದ ಶುಲ್ಕ ₹1,120ರಿಂದ ₹1,360ಕ್ಕೆ ಏರಿಕೆಯಾಗಬಹುದು.


ಇಷ್ಟೇ ಅಲ್ಲದೆ, 2031ರ ಮಾರ್ಚ್ ವೇಳೆಗೆ ದೇಶೀಯ ನಿರ್ಗಮನದ ಶುಲ್ಕ ₹1,440 ಹಾಗೂ ಅಂತರರಾಷ್ಟ್ರೀಯ ನಿರ್ಗಮನದ ಶುಲ್ಕ ₹2,210ಕ್ಕೆ ತಲುಪುವ ಪ್ರಸ್ತಾವನೆಯೂ ಇದೆ.


ವಿಮಾನ ನಿಲ್ದಾಣದಲ್ಲಿ ರನ್‌ವೇ, ಟ್ಯಾಕ್ಸಿವೇ, ಏಪ್ರನ್ ಮತ್ತು ಟರ್ಮಿನಲ್ ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿದೆ.


ಆದರೆ, ಈ ದರ ಏರಿಕೆ ಇನ್ನೂ ಪ್ರಸ್ತಾವನೆಯ ಹಂತದಲ್ಲಿದೆ. ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರವಾದ AERA ಅಂತಿಮ ಅನುಮೋದನೆ ನೀಡಿದ ಬಳಿಕವಷ್ಟೇ ದರ ಜಾರಿಯ ಬಗ್ಗೆ ಸ್ಪಷ್ಟತೆ ಸಿಗಲಿದೆ. ಹೀಗಾಗಿ ಪ್ರಯಾಣಿಕರು ಸದ್ಯಕ್ಕೆ ಪ್ರಸ್ತಾವಿತ ದರಗಳನ್ನೇ ಅಂತಿಮ ದರಗಳೆಂದು ಪರಿಗಣಿಸಬಾರದು.