ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಸಮೀಪದ ವರುಣಾ ನಾಲೆ ಬಳಿ ಮೈಸೂರು ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿ ವೈಭವ್ (17) ನಾಪತ್ತೆಯಾಗಿದ್ದಾರೆ.

ಮಂಡ್ಯ: ಹುಟ್ಟುಹಬ್ಬದ ದಿನವೇ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಸಮೀಪದ ವರುಣಾ ನಾಲೆ ಬಳಿ ನಡೆದಿದೆ.

ಮೈಸೂರು ಮೂಲದ 17 ವರ್ಷದ ವೈಭವ್ ನಾಪತ್ತೆಯಾದ ವಿದ್ಯಾರ್ಥಿ. ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೈಭವ್, ಹುಟ್ಟುಹಬ್ಬದ ದಿನ ಮನೆಯಿಂದ ಬೈಕ್‌ನಲ್ಲಿ ಹೊರಟಿದ್ದರು ಎನ್ನಲಾಗಿದೆ.


ಆದರೆ, ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ವರುಣಾ ನಾಲೆಯ ದಂಡೆಯ ಬಳಿ ವೈಭವ್ ಅವರ ಬೈಕ್, ಬಟ್ಟೆ ಹಾಗೂ ಮೊಬೈಲ್ ಪತ್ತೆಯಾಗಿವೆ.

ವೈಭವ್ ನಾಲೆಯ ನೀರಿಗೆ ಇಳಿದಿದ್ದಾರೆಯೇ ಅಥವಾ ಬೇರೆ ಕಾರಣದಿಂದ ನಾಪತ್ತೆಯಾಗಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಘಟನೆಯಿಂದ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದ್ದು, ವಿದ್ಯಾರ್ಥಿಯ ಪತ್ತೆಗಾಗಿ ಶೋಧ ಕಾರ್ಯ ನಡೆಸುವಂತೆ ಮನವಿ ಮಾಡಲಾಗಿದೆ. ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಪರಿಶೀಲನೆಯ ಬಳಿಕ ನಾಪತ್ತೆಯ ಹಿಂದಿನ ನಿಖರ ಕಾರಣ ತಿಳಿದುಬರಬೇಕಿದೆ.