ಬೇಲೂರಿನ ನೆಹರು ನಗರ ವೃತ್ತದಲ್ಲಿರುವ ಉಡುಪಿ ಗ್ರಾಂಡ್ ಹೋಟೆಲ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ನೆಹರು ನಗರ ವೃತ್ತದಲ್ಲಿರುವ ಉಡುಪಿ ಗ್ರಾಂಡ್ ಹೋಟೆಲ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ವಾಣಿಜ್ಯ ಉದ್ದೇಶಕ್ಕೆ ಗೃಹಬಳಕೆಯ ಅನಿಲ ಸಿಲಿಂಡರ್ ಬಳಸಿದ ಆರೋಪದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ.
ಆಹಾರ ನಿರೀಕ್ಷಕಿ ವೀಣಾ ಹಾಗೂ ಆಹಾರ ಶಿರಸ್ತೇದಾರ್ ಗೀತಾಂಜಲಿ ಅವರು ಬೇಲೂರು ಪೊಲೀಸ್ ಠಾಣೆಯ ಸಿಬ್ಬಂದಿ ಉಮೇಶ್ ಕೆ.ಆರ್. ಅವರ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಪರಿಶೀಲನೆ ವೇಳೆ 14.2 ಕೆ.ಜಿ. ತೂಕದ ಎಚ್ಪಿ ಕಂಪನಿಯ ಒಂದು ಖಾಲಿ ಸಿಲಿಂಡರ್ ಮತ್ತು ಒಂದು ತುಂಬಿದ ಸಿಲಿಂಡರ್ ಸೇರಿದಂತೆ ಒಟ್ಟು ಎರಡು ಸಿಲಿಂಡರ್ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹೋಟೆಲ್ ಮಾಲೀಕ ಪ್ರಸನ್ನ ಬಿನ್ ನಿರ್ವಾಣೆಗೌಡ ಅವರ ವಿರುದ್ಧ ಪ್ರಕರಣ ದಾಖಲಿಸಲು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ನಿರೀಕ್ಷಕಿ ವೀಣಾ ತಿಳಿಸಿದ್ದಾರೆ.
ಗೃಹಬಳಕೆಯ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ನಿಯಮಬಾಹಿರವಾಗಿದ್ದು, ಇಂತಹ ಉಲ್ಲಂಘನೆಗಳ ವಿರುದ್ಧ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ದಾಳಿಯ ಬೆನ್ನಲ್ಲೇ ಬೇಲೂರು ಪಟ್ಟಣದ ಹೋಟೆಲ್ಗಳಲ್ಲಿ ಅನಿಲ ಬಳಕೆಯ ನಿಯಮಗಳ ಪಾಲನೆ ಕುರಿತು ಚರ್ಚೆ ಆರಂಭವಾಗಿದೆ.