ಚಿಕ್ಕಮಗಳೂರಿನ ಬಿಂಡಿಗ ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ ಭಕ್ತರೊಂದಿಗೆ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆದಿದ್ದಾರೆ. 

ಜಿಲ್ಲೆಯ ಪ್ರಸಿದ್ಧ ಶಕ್ತಿ ದೇವತೆ ಬಿಂಡಿಗ ದೇವಿರಮ್ಮ ಜಾತ್ರೆ ಸಂಭ್ರಮದಿಂದ ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಾವಿರಾರು ಭಕ್ತರು ಬೆಟ್ಟ ಏರಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಈ ಬಾರಿ ಕನ್ನಡ ಚಿತ್ರರಂಗದ ನಟಿ ಅಮೂಲ್ಯ ಕೂಡ ಭಕ್ತರೊಂದಿಗೆ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದಿದ್ದಾರೆ. ನಟಿಯ ಆಗಮನ ಜಾತ್ರೆಯ ವಿಶೇಷ ಆಕರ್ಷಣೆಯಾಗಿದೆ.

ಸಮುದ್ರ ಮಟ್ಟದಿಂದ ಸುಮಾರು 6 ಸಾವಿರ ಅಡಿ ಎತ್ತರದಲ್ಲಿರುವ ದೇವಿರಮ್ಮ ಬೆಟ್ಟವನ್ನು ಏರಿ ದರ್ಶನ ಪಡೆಯುವುದು ಭಕ್ತರಿಗೆ ವಿಶೇಷ ಅನುಭವವಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತವು ಎರಡು ದಿನಗಳ ಕಾಲ ಭಕ್ತರಿಗೆ ಬೆಟ್ಟ ಏರಲು ಅವಕಾಶ ಕಲ್ಪಿಸಿದೆ.

ಭಕ್ತರ ಸುರಕ್ಷತೆಯ ದೃಷ್ಟಿಯಿಂದ 15 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದೊಳಗಿನವರಿಗೆ ಮಾತ್ರ ಬೆಟ್ಟ ಏರಲು ಅವಕಾಶ ನೀಡಲಾಗಿದೆ. ರಾತ್ರಿ ವೇಳೆ ಬೆಟ್ಟ ಹತ್ತುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಕಿರಿದಾದ ಮತ್ತು ದುರ್ಗಮ ಹಾದಿಯಲ್ಲೂ ಭಕ್ತರು ಉತ್ಸಾಹದಿಂದ ಬೆಟ್ಟ ಏರುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಜಾತ್ರೆಗೆ ಆಗಮಿಸುತ್ತಿದ್ದಾರೆ.