ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಕಿರಾಣಿ ಅಂಗಡಿಗೆ ಬೆಂಕಿ ತಗುಲಿ ಮಾಲೀಕ ಶಂಕ್ರಯ್ಯ (55) ಮೃತಪಟ್ಟಿದ್ದಾರೆ.
ದಾವಣಗೆರೆ: ಕಿರಾಣಿ ಅಂಗಡಿಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಅಂಗಡಿ ಮಾಲೀಕರೊಬ್ಬರು ಮೃತಪಟ್ಟಿರುವ ಘಟನೆ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ಶಂಕ್ರಯ್ಯ (55) ಎಂದು ಗುರುತಿಸಲಾಗಿದೆ. ಅವರು ಕಿರಾಣಿ ಅಂಗಡಿಯಲ್ಲಿ ದಿನಸಿ ಸಾಮಗ್ರಿಗಳ ಜೊತೆಗೆ ಪೆಟ್ರೋಲ್ ಕೂಡ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರತಿದಿನದಂತೆ ಬೆಳಿಗ್ಗೆ ಅಂಗಡಿ ತೆರೆದು ಪೂಜೆ ಸಲ್ಲಿಸುವ ಸಂದರ್ಭದಲ್ಲಿ ದೀಪ ಹಚ್ಚುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಪಕ್ಕದಲ್ಲಿದ್ದ ಪೆಟ್ರೋಲ್ಗೆ ಬೆಂಕಿ ತಗುಲಿ ಅಂಗಡಿಯೊಳಗೆ ಬೆಂಕಿ ವೇಗವಾಗಿ ವ್ಯಾಪಿಸಿದೆ ಎಂದು ವರದಿಯಾಗಿದೆ. ಈ ವೇಳೆ ಹೊರಬರಲು ಸಾಧ್ಯವಾಗದೆ ಶಂಕ್ರಯ್ಯ ಮೃತಪಟ್ಟಿದ್ದಾರೆ.
ಅಂಗಡಿಯಲ್ಲಿ ಪೆಟ್ರೋಲ್ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ವಿಚಾರವೂ ಬೆಳಕಿಗೆ ಬಂದಿದ್ದು, ಅಗ್ನಿ ಅವಘಡದ ನಿಖರ ಕಾರಣದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಹೊನ್ನಾಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.