ಆನೇಕಲ್ ತಾಲೂಕಿನ ರಾಮಕೃಷ್ಣಪುರ ರಸ್ತೆ ಬದಿ ಪೊದೆಯಲ್ಲಿ ಪತ್ತೆಯಾಗಿದ್ದ ಯುವಕನ ಶವದ ಗುರುತು ಪತ್ತೆಯಾಗಿದೆ.
ಆನೇಕಲ್: ರಸ್ತೆ ಬದಿ ಪೊದೆಯಲ್ಲಿ ಪತ್ತೆಯಾಗಿದ್ದ ಯುವಕನ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೃತನ ಗುರುತು ಪತ್ತೆಹಚ್ಚಿದ್ದಾರೆ. ಆನೇಕಲ್ ತಾಲೂಕಿನ ಕರ್ಪೂರು ಗ್ರಾಮದ ನಿವಾಸಿ ಸುಭಾಷ್ ಎಂಬಾತನೇ ಕೊಲೆಯಾದ ಯುವಕ ಎಂದು ತಿಳಿದುಬಂದಿದೆ.
ರಾಮಕೃಷ್ಣಪುರ ರಸ್ತೆ ಬದಿಯಲ್ಲಿ ಸುಭಾಷ್ನ ಶವ ಪತ್ತೆಯಾಗಿತ್ತು. ಇದೇ ತಿಂಗಳ 23ರಂದು ರಾತ್ರಿ ಸುಭಾಷ್ ಹಾಗೂ ಆತನ ಸ್ನೇಹಿತರ ಗುಂಪು ಆಟೋದಲ್ಲಿ ರಾಮಕೃಷ್ಣಪುರ ರಸ್ತೆಗೆ ಬಂದು ಪಾರ್ಟಿ ಮಾಡಿದ್ದರು ಎನ್ನಲಾಗಿದೆ.
ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ನಂತರ ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸುಭಾಷ್ನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸುಭಾಷ್ ವಿರುದ್ಧ ಈ ಹಿಂದೆ ಡಕಾಯಿತಿ ಹಾಗೂ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.