ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆ.24ರಂದು ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದ್ದು, ಸೆಪ್ಟೆಂಬರ್ 24ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಭಾರಿ ಮಳೆಯ ಜೊತೆಗೆ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಸೆ.24ರಂದು ಗುಡುಗು, ಮಿಂಚು ಹಾಗೂ ಬಿರುಗಾಳಿಯ ಸಾಧ್ಯತೆಯೂ ಇದೆ. ಸೆ.25ರಂದು ಕೂಡ ಗುಡುಗು-ಮಿಂಚು ಮತ್ತು ಬಿರುಗಾಳಿಯ ಸಾಧ್ಯತೆ ಮುಂದುವರಿಯಲಿದ್ದು, ಸೆ.26ರಿಂದ ಯಾವುದೇ ಮಳೆ ಎಚ್ಚರಿಕೆ ಇಲ್ಲ ಎಂದು ತಿಳಿಸಲಾಗಿದೆ.
ಮಳೆ ಹೆಚ್ಚಾಗುವ ಹಿನ್ನೆಲೆಯಲ್ಲಿ ನದಿ, ಹಳ್ಳ, ಕೆರೆ ಹಾಗೂ ಸಮುದ್ರ ಪ್ರದೇಶಗಳಿಗೆ ತೆರಳದಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಸೂಚಿಸಿದೆ. ಮಿಂಚು ಮತ್ತು ಬಿರುಗಾಳಿಯ ಸಂದರ್ಭದಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳ ಕೆಳಗೆ ನಿಲ್ಲದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ರೈತರು ಮತ್ತು ಮೀನುಗಾರರು ಹವಾಮಾನ ಮುನ್ಸೂಚನೆ ಗಮನಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ತಿಳಿಸಿದೆ.