ತೆಲಂಗಾಣದ ಸೂರ್ಯಪೇಟ ಜಿಲ್ಲೆಯಲ್ಲಿ Volvo ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ನರರೋಗ ತಜ್ಞ ಕಸಕುರ್ತಿ ಜಗದೀಶ್ ಮೃತಪಟ್ಟಿದ್ದಾರೆ. 

ಡಿವೈಡರ್‌ಗೆ ಡಿಕ್ಕಿ ಹೊಡೆದ Volvo ಕಾರು ಏಕಾಏಕಿ ಹೊತ್ತಿ ಉರಿದ ಪರಿಣಾಮ ನರರೋಗ ತಜ್ಞರೊಬ್ಬರು ಸಜೀವ ದಹನವಾಗಿರುವ ದಾರುಣ ಘಟನೆ ತೆಲಂಗಾಣದ ಸೂರ್ಯಪೇಟ ಜಿಲ್ಲೆಯಲ್ಲಿ ನಡೆದಿದೆ.

ಭಾನುವಾರ ಬೆಳಗ್ಗೆ ಸುಮಾರು 7:15ಕ್ಕೆ ಸೂರ್ಯಪೇಟದ ಪಿಲ್ಲಲಮರ್ರಿ ಬಳಿ ಖಮ್ಮಂ-ಹೈದರಾಬಾದ್ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.


ಕಾರಿನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಮೃತರನ್ನು ಕಸಕುರ್ತಿ ಜಗದೀಶ್ ಎಂದು ಗುರುತಿಸಲಾಗಿದೆ. ಅವರು ಖಮ್ಮಂನ ಆಸ್ಪತ್ರೆಯಲ್ಲಿ ನರರೋಗ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು. ಖಮ್ಮಂನಿಂದ ಹೈದರಾಬಾದ್‌ಗೆ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಚಾಲನೆ ವೇಳೆ ನಿದ್ದೆ ಬಂದಿರುವುದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.

ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಸುಟ್ಟು ಕರಕಲಾದ ಅವಶೇಷಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಕಳುಹಿಸಿದೆ.