Vijayapura : ಚಾಕಲೇಟ್ ಕದ್ದಿದ್ದಾನೆಂದು ಆರೋಪಿಸಿ ಬಾಲಕನಿಗೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮಲಘಾಣ ಗ್ರಾಮದಲ್ಲಿ ನಡೆದಿದೆ.
ಮಲಘಾಣ ಗ್ರಾಮದ ಅಂಗಡಿಯೊಂದರಲ್ಲಿ ಚಾಕಲೇಟ್ ಕದ್ದಿದ್ದಾನೆಂದು ಆರೋಪಿಸಿ, ಅಂಗಡಿ ಮಾಲೀಕ ಅಶೋಕ್ ಪತ್ತಾರ ಎಂಬಾತ ಬಾಲಕನಿಗೆ ಥಳಿಸಿದ್ದಾನೆ ಎನ್ನಲಾಗಿದೆ.
ಘಟನೆಯ ಬಳಿಕ ಬಾಲಕನ ತಂದೆ ರೆಹಮಾನ್ ವಾಲೀಕಾರ್ ಅವರು ಆಲಮೇಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಆಲಮೇಲ ಪೊಲೀಸರು, ಬಾಲಕನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಅಂಗಡಿ ಮಾಲೀಕ ಅಶೋಕ್ ಪತ್ತಾರನನ್ನು ಬಂಧಿಸಿದ್ದಾರೆ.
ಸಣ್ಣ ವಿಚಾರಕ್ಕೆ ಬಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.