ದೀಪಾವಳಿ ಬಳಿಕ ಯುಪಿಐ ವಹಿವಾಟುಗಳ ಮೇಲೆ MDR ಶುಲ್ಕ ಜಾರಿಯಾಗುವ ಸಾಧ್ಯತೆ. ₹2,000 ಮೀರಿದ ವ್ಯಾಪಾರಿ ಪಾವತಿಗಳಿಗೆ ಶುಲ್ಕ, ಗ್ರಾಹಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಇರುವ ವಿನಾಯಿತಿಗಳ ವಿವರ ಇಲ್ಲಿದೆ.
ಯುಪಿಐ ವಹಿವಾಟುಗಳ ಮೇಲಿನ ಶುಲ್ಕ ಜಾರಿಯನ್ನು ಮುಂದೂಡುವಂತೆ ವ್ಯಾಪಾರಿಗಳು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಅಕ್ಟೋಬರ್ 15ರಿಂದ ಜಾರಿಯಾಗಬೇಕಿದ್ದ ವ್ಯಾಪಾರಿ ಪಾವತಿಗಳ ಮೇಲಿನ MDR ಶುಲ್ಕವನ್ನು ದೀಪಾವಳಿ ನಂತರ, ನವೆಂಬರ್ ಎರಡನೇ ವಾರದಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ವರದಿ ಹೇಳಿದೆ. ನಿಖರ ದಿನಾಂಕವನ್ನು ಪ್ರಕಟಿಸಬೇಕಿದೆ.
ಯಾವ ವಹಿವಾಟಿಗೆ ಎಷ್ಟು ಶುಲ್ಕ? ವರದಿಯ ಪ್ರಕಾರ, ₹2,000ವರೆಗಿನ ವಹಿವಾಟುಗಳಿಗೆ ಶುಲ್ಕವಿಲ್ಲ. ಅದಕ್ಕಿಂತ ಹೆಚ್ಚಿನ ಆಯ್ದ ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ ಪಾವತಿಗಳಿಗೆ ಶೇಕಡಾ 0.4ರಷ್ಟು MDR ಅನ್ವಯವಾಗಲಿದೆ. ಕೆಲವು ಅಗತ್ಯ ಸೇವೆಗಳು ಮತ್ತು ಬಂಡವಾಳ ಮಾರುಕಟ್ಟೆ ಪಾವತಿಗಳಿಗೆ ಪ್ರತ್ಯೇಕ ದರಗಳನ್ನು ನಿಗದಿಪಡಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಹಕರಿಗೆ ಶುಲ್ಕ ಬೀಳುತ್ತಾ? ಈ ಶುಲ್ಕವನ್ನು ವ್ಯಾಪಾರಿಗಳು ಭರಿಸಬೇಕಾಗಿದ್ದು, ಸಾಮಾನ್ಯ ಗ್ರಾಹಕರ ಯುಪಿಐ ಪಾವತಿಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸ್ನೇಹಿತರು ಅಥವಾ ಕುಟುಂಬದವರಿಗೆ ಮಾಡುವ ವ್ಯಕ್ತಿಗತ UPI ವರ್ಗಾವಣೆಗಳು ಉಚಿತವಾಗಿಯೇ ಮುಂದುವರಿಯಲಿವೆ ಎಂದು ಹೇಳಲಾಗಿದೆ.
ಶುಲ್ಕ ಜಾರಿಯನ್ನು ಮುಂದೂಡಿದ್ದೇಕೆ? ದಸರಾ–ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರ ಖರೀದಿಗೆ ಅಡ್ಡಿಯಾಗದಂತೆ ಹಾಗೂ ಪಾವತಿ ಕಂಪನಿಗಳಿಗೆ ತಾಂತ್ರಿಕ ವ್ಯವಸ್ಥೆಗಳನ್ನು ನವೀಕರಿಸಲು ಸಮಯ ನೀಡುವ ಉದ್ದೇಶದಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.