Udupi ಜಿಲ್ಲೆಯ ಭಟ್ಕಳ ಸಮೀಪದ ಶಿರೂರಿನಲ್ಲಿ ಅಪಘಾತಕ್ಕೀಡಾದ ಲಾರಿ ತೆರವು ಕಾರ್ಯ ವೀಕ್ಷಿಸುತ್ತಿದ್ದ ವ್ಯಕ್ತಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. 

ಭಟ್ಕಳ ಸಮೀಪದ ಶಿರೂರು ಬಳಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಪಘಾತಕ್ಕೀಡಾದ ವಾಹನ ತೆರವು ಕಾರ್ಯವನ್ನು ವೀಕ್ಷಿಸುತ್ತಿದ್ದ ವ್ಯಕ್ತಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಶಿರೂರು ನಿವಾಸಿ ನಾಗೇಂದ್ರ ಮಹಾಲೆ (45) ಎಂದು ಗುರುತಿಸಲಾಗಿದೆ.


ಘಟನಾ ಸ್ಥಳದಲ್ಲಿ ಈ ಹಿಂದೆ ಅಪಘಾತಕ್ಕೀಡಾಗಿದ್ದ ಸರಕು ತುಂಬಿದ ಲಾರಿಯನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸಂಚಾರ ನಿಯಂತ್ರಿಸಲಾಗುತ್ತಿತ್ತು.

ನಾಗೇಂದ್ರ ಮಹಾಲೆ ಸೇರಿದಂತೆ ಹಲವರು ರಸ್ತೆ ಬದಿಯಲ್ಲಿ ನಿಂತು ಲಾರಿ ತೆರವು ಕಾರ್ಯವನ್ನು ವೀಕ್ಷಿಸುತ್ತಿದ್ದರು.


ನಿಯಂತ್ರಣ ತಪ್ಪಿದ ಲಾರಿ

ಈ ವೇಳೆ ಕೇರಳದಿಂದ ಮಹಾರಾಷ್ಟ್ರಕ್ಕೆ ರಬ್ಬರ್ ತುಂಬಿಕೊಂಡು ತೆರಳುತ್ತಿದ್ದ ಮತ್ತೊಂದು ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ನುಗ್ಗಿದೆ.

ಮೊದಲು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ನಾಲ್ಕು ದ್ವಿಚಕ್ರ ವಾಹನಗಳಿಗೆ ಲಾರಿ ಡಿಕ್ಕಿ ಹೊಡೆದಿದೆ. ಬಳಿಕ ಮೂರು ಬೈಕ್‌ಗಳನ್ನು ಎಳೆದುಕೊಂಡು ಮುಂದಕ್ಕೆ ಸಾಗಿದ ಲಾರಿ, ಹೈವೇ ಪೆಟ್ರೋಲ್ ವಾಹನಕ್ಕೂ ಡಿಕ್ಕಿ ಹೊಡೆದಿದೆ.

ಇದೇ ವೇಳೆ ದ್ವಿಚಕ್ರ ವಾಹನಗಳ ಸಮೀಪ ನಿಂತಿದ್ದ ನಾಗೇಂದ್ರ ಮಹಾಲೆ ಅವರಿಗೂ ಲಾರಿ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.