ರಾಯಚೂರಿನ ಜಹಿರಾಬಾದ್‌ನ ಎಂ.ಈರಣ್ಣ ವೃತ್ತದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಹರಿದು 14 ಮತ್ತು 16 ವರ್ಷದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.

ರಾಯಚೂರು: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ರಾಯಚೂರು ನಗರದ ಜಹಿರಾಬಾದ್‌ನ ಎಂ.ಈರಣ್ಣ ವೃತ್ತದಲ್ಲಿ ನಡೆದಿದೆ.


ಮೃತರನ್ನು 14 ವರ್ಷದ ಸುಚಿತ್ ಹಾಗೂ 16 ವರ್ಷದ ಚರಣಕುಮಾರ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 36 ವರ್ಷದ ವಿಜಯಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಜಹಿರಾಬಾದ್‌ನಿಂದ ನಗರದ ಖಾಸಬಾವಿಗೆ ಗಣೇಶ ವಿಸರ್ಜನೆ ಮೆರವಣಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೆರವಣಿಗೆಯಲ್ಲಿದ್ದವರ ಮೇಲೆ ಟ್ರ್ಯಾಕ್ಟರ್ ಹರಿದಿದೆ ಎಂದು ತಿಳಿದುಬಂದಿದೆ.


ಟ್ರ್ಯಾಕ್ಟರ್ ಚಾಲಕ ಬ್ರೇಕ್ ಬದಲು ಆಕ್ಸಿಲರೇಟರ್ ಒತ್ತಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಘಟನೆಯಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘಟನೆ ಸಂಬಂಧ ರಾಯಚೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.