ಭಟ್ಕಳದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ ಹಾಗೂ ಮದರಸಾ ಮೇಲೆ ಕಲ್ಲು ತೂರಾಟದ ಆರೋಪ ಕೇಳಿಬಂದಿದೆ.
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ ಹಾಗೂ ಮದರಸಾ ಮೇಲೆ ಕಲ್ಲು ತೂರಾಟ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಇದೇ ವೇಳೆ ಗಣೇಶ ಮೆರವಣಿಗೆ ಮೇಲೂ ಕಲ್ಲು ಎಸೆತದ ಆರೋಪ ಕೇಳಿಬಂದಿದ್ದು, ಈ ಕುರಿತು ಮತ್ತೊಂದು ದೂರು ದಾಖಲಾಗಿದೆ.
ಗುಳ್ಮಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಗಣೇಶ ಮೆರವಣಿಗೆ ಸಾಗುತ್ತಿದ್ದ ವೇಳೆ ಇಸ್ಮಾಯಿಲ್ ಸುನ್ನಿ ಜಾಮಿಯಾ ಮಸೀದಿ ಹಾಗೂ ತಾಜುಸುನ್ನಾ ಅರೇಬಿಕ್ ಮದರಸಾ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆದಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಕಿಟಕಿ ಗಾಜುಗಳಿಗೆ ಹಾನಿಯಾಗಿರುವುದಾಗಿ ದೂರು ನೀಡಲಾಗಿದೆ.
ಘಟನೆ ಸಂಬಂಧ ಎರಡೂ ಕಡೆಯಿಂದ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಲಾಗಿದೆ.
ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್. ನೇತೃತ್ವದಲ್ಲಿ ಪೊಲೀಸರು ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಆರೋಪಿಗಳ ಪತ್ತೆ ಹಾಗೂ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.