ತುಮಕೂರು ದಸರಾ ವೇದಿಕೆಯಲ್ಲಿ ಕಾರದ ಮಠದ ಶ್ರೀ ವೀರಬಸವ ಸ್ವಾಮೀಜಿ ಅವರು ಡಿಸಿಎಂ ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂದು ಆಶೀರ್ವದಿಸಿದ್ದಾರೆ.

ತುಮಕೂರು: ದಸರಾ ವೇದಿಕೆಯಲ್ಲೇ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಕಾರದ ಮಠದ ಶ್ರೀ ವೀರಬಸವ ಸ್ವಾಮೀಜಿ ಆಶೀರ್ವದಿಸಿದ್ದಾರೆ.


ಅಮರಶಿಲ್ಪಿ ಜಕಣಾಚಾರಿ ಸಾಂಸ್ಕೃತಿಕ ವೇದಿಕೆಯಲ್ಲಿ ಮಾತನಾಡಿದ ಶ್ರೀಗಳು, ಪರಮೇಶ್ವರ್ ಅವರ ನೇತೃತ್ವದಲ್ಲಿ ತುಮಕೂರು ದಸರಾ ವೈಭವದಿಂದ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಸ್ವಾರ್ಥ ಅಥವಾ ವೈಯಕ್ತಿಕ ಆಸೆಯಿಲ್ಲದೆ ದಸರಾ ಆಚರಣೆಗೆ ಅವರು ಮುಂದಾಗಿದ್ದಾರೆ ಎಂದರು.


ಪ್ರಸ್ತುತ ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿದ್ದು, ಅವರ ಹುದ್ದೆಯಲ್ಲಿರುವ ‘ಉಪ’ ಪದ ಹೋಗಿ ‘ಮುಖ್ಯಮಂತ್ರಿ’ ಮಾತ್ರ ಉಳಿಯಲಿ ಎಂಬುದು ತಮ್ಮ ಆಶಯ ಎಂದು ಶ್ರೀ ವೀರಬಸವ ಸ್ವಾಮೀಜಿ ಹೇಳಿದರು.


ಇನ್ನು ಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ತುಮಕೂರು ಜನರು ಮೈಸೂರಿಗೆ ತೆರಳಿ ದಸರಾ ವೀಕ್ಷಿಸಲು ಕಷ್ಟವಾಗುವುದರಿಂದ ನಗರದಲ್ಲೇ ವೈಭವದ ದಸರಾ ಆಚರಣೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.


ಮೈಸೂರಿನ ಪ್ರತಿರೂಪವಾಗಿ ತುಮಕೂರು ಬೆಳೆಯುತ್ತಿರುವುದಕ್ಕೆ ದಸರಾ ಹಾಗೂ ನಗರದ ದೀಪಾಲಂಕಾರ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.