ಹುಬ್ಬಳ್ಳಿಯ ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮದಲ್ಲಿ ಎರಡು ATMಗಳನ್ನು ಗ್ಯಾಸ್ ಕಟರ್ ಬಳಸಿ ಒಡೆದು ಕಳ್ಳರು ₹14 ಲಕ್ಷ ಹಣ ದೋಚಿದ್ದಾರೆ.
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮದಲ್ಲಿ ಎರಡು ಎಟಿಎಂಗಳನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ. ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಶೆಟರ್ನ ಲಾಕ್ ಮುರಿದು, ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿದ್ದ ಹಣವನ್ನು ಕಳ್ಳತನ ಮಾಡಲಾಗಿದೆ.
ಸುಳ್ಳ ಗ್ರಾಮದ ಎಟಿಎಂನಿಂದ ಸುಮಾರು ₹11 ಲಕ್ಷ ಹಾಗೂ ಬ್ಯಾಹಟ್ಟಿ ಗ್ರಾಮದ ಎಟಿಎಂನಿಂದ ₹3 ಲಕ್ಷ ಹಣ ದೋಚಲಾಗಿದೆ. ಕಳ್ಳರು ಗುರುತು ಪತ್ತೆಯಾಗದಂತೆ ಸಿಸಿ ಕ್ಯಾಮೆರಾಗಳನ್ನು ಕೂಡ ಧ್ವಂಸ ಮಾಡಿದ್ದಾರೆ.
ಎರಡೂ ಎಟಿಎಂಗಳು ಗ್ರಾಮದ ನಡುರಸ್ತೆಯಲ್ಲಿದ್ದರೂ ಕಳ್ಳರು ಕೃತ್ಯ ಎಸಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ವಿನೋದ್ ಮುಕ್ತೆದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಬಲೆ ಬೀಸಿದ್ದಾರೆ.