ಬೆಂಗಳೂರಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ಗೆ ಆನಂದಪುರ ಬಳಿಯ ಮುಂಬಾಳು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. 

ಶಿವಮೊಗ್ಗ: ಬೆಂಗಳೂರಿನಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಆನಂದಪುರ ಬಳಿಯ ಮುಂಬಾಳು ಗ್ರಾಮದಲ್ಲಿ ನಡೆದಿದೆ.

ಬೆಂಗಳೂರು–ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬಸ್ ಸಂಚರಿಸುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ನೋಡನೋಡುತ್ತಿದ್ದಂತೆ ಬೆಂಕಿ ಬಸ್‌ನ್ನು ಆವರಿಸಿದ್ದು, ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದೆ.


ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಹಾಗೂ ಕ್ಲೀನರ್ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬಹುತೇಕ ಪ್ರಯಾಣಿಕರು ಶಿವಮೊಗ್ಗದಲ್ಲೇ ಇಳಿದಿದ್ದರೆ, ಸಾಗರಕ್ಕೆ ಇಬ್ಬರು ಪ್ರಯಾಣಿಕರು ಮಾತ್ರ ತೆರಳುತ್ತಿದ್ದರು ಎನ್ನಲಾಗಿದೆ. ಹೆಚ್ಚಿನ ಪ್ರಯಾಣಿಕರು ಬಸ್‌ನಲ್ಲಿದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.