ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದೇವರಹಳ್ಳಿ ಬಳಿ ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ರಾಕೇಶ್ (20) ಮೃತಪಟ್ಟಿದ್ದಾರೆ. 

ಶಿವಮೊಗ್ಗ: ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ 20 ವರ್ಷದ ಯುವಕ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ದೇವರಹಳ್ಳಿ ಗ್ರಾಮದ ಬಳಿ ನಡೆದಿದೆ. ಮೃತ ಯುವಕನನ್ನು ರಾಕೇಶ್ (20) ಎಂದು ಗುರುತಿಸಲಾಗಿದೆ.

ಭದ್ರಾವತಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ರಾಕೇಶ್, ರಂಗನಾಥಪುರದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಭಾನುವಾರ ಸಂಜೆ ಆರಂಭವಾಗಿದ್ದ ಮೆರವಣಿಗೆ ತಡರಾತ್ರಿ ಸುಮಾರು 1 ಗಂಟೆಗೆ ದೇವರಹಳ್ಳಿ ಕೆರೆ ಬಳಿ ತಲುಪಿತ್ತು.


ಗಣೇಶ ವಿಸರ್ಜನೆ ವೇಳೆ ಆಯತಪ್ಪಿ ನೀರಿಗೆ ಬಿದ್ದ ರಾಕೇಶ್ ಕಣ್ಮರೆಯಾಗಿದ್ದರು. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ರಾತ್ರಿಯಿಡೀ ಶೋಧ ಕಾರ್ಯ ನಡೆಸಲಾಯಿತು.


ಕೆರೆಯಲ್ಲಿ ಗಿಡ-ಗಂಟಿ ಹಾಗೂ ಹುಲ್ಲು ಹೆಚ್ಚಾಗಿದ್ದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿತ್ತು. ನಿರಂತರ ಕಾರ್ಯಾಚರಣೆಯ ಬಳಿಕ ಇಂದು ಬೆಳಗ್ಗೆ ರಾಕೇಶ್ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ಸಂಬಂಧ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.