ಮದುವೆಯಾಗುವುದಾಗಿ ನಂಬಿಸಿ ಮೋಸ ಹಾಗೂ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಪಡೆದ ಆರೋಪದಡಿ ಟ್ಯಾಟೂ ಆರ್ಟಿಸ್ಟ್ ಕಮ್ ನಟ ಅರ್ಜುನ್ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ FIR ದಾಖಲಾಗಿದೆ.

ಟ್ಯಾಟೂ ಆರ್ಟಿಸ್ಟ್ ಕಮ್ ನಟ ಅರ್ಜುನ್ ವಿರುದ್ಧ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಹಿಳೆ ನೀಡಿರುವ ದೂರಿನ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ಟ್ಯಾಟೂ ಹಾಕಿಸಿಕೊಳ್ಳಲು ತೆರಳಿದ್ದ ವೇಳೆ ಅರ್ಜುನ್ ಪರಿಚಯವಾಗಿದ್ದ. ಬಳಿಕ ಸ್ನೇಹ ಪ್ರೀತಿಗೆ ತಿರುಗಿದ್ದು, ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಆತ್ಮೀಯವಾಗಿದ್ದಾನೆ ಎಂದು ಆರೋಪಿಸಲಾಗಿದೆ.


ತನ್ನ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ, 2024ರ ನವೆಂಬರ್‌ನಿಂದ ಹಂತ ಹಂತವಾಗಿ ಸುಮಾರು ₹9 ಲಕ್ಷ ಹಣ ಪಡೆದಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿದ್ದು, ಹಣ ನೀಡದಿದ್ದರೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.


ಸೆಪ್ಟೆಂಬರ್ 2ರಂದು ಮಹಿಳೆಯ ಮನೆಗೆ ಬಂದ ಅರ್ಜುನ್, ಕರೆ ಸ್ವೀಕರಿಸದಿರುವ ಬಗ್ಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಇನ್ನು ಕೆಲ ದಿನಗಳ ಹಿಂದಷ್ಟೇ ಅರ್ಜುನ್ ಕೂಡ ಮಹಿಳೆ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಆರೋಪದಡಿ ದೂರು ನೀಡಿದ್ದ ಎನ್ನಲಾಗಿದೆ. ಇದೀಗ ಮಹಿಳೆಯೂ ಅರ್ಜುನ್ ವಿರುದ್ಧ ದೂರು ನೀಡಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.