ಬೆಂಗಳೂರಿನ ಆರ್ಆರ್ ನಗರ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಚಿತಾ ರಾಮ್.
ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಅವರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ಆರ್ಆರ್ ನಗರದಲ್ಲಿರುವ ನಿವಾಸದಲ್ಲಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಬರ್ತ್ಡೇ ಆಚರಣೆ ನಡೆದಿದೆ.
ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ರಚಿತಾ ರಾಮ್, ಕನ್ನಡ ಚಿತ್ರರಂಗದಲ್ಲಿ 14 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಶುಭಾಶಯಗಳನ್ನು ಸ್ವೀಕರಿಸಿದರು.
ಈ ವೇಳೆ ನಟ ದರ್ಶನ್ ಅವರನ್ನು ನೆನೆದ ರಚಿತಾ ರಾಮ್, ಇತ್ತೀಚೆಗೆ ಅವರ ಆಶೀರ್ವಾದ ಪಡೆಯಲು ಭೇಟಿ ನೀಡಲು ತೆರಳಿದ್ದಾಗಿ ಹೇಳಿದರು. ಆದರೆ ಕುಟುಂಬದವರ ಭೇಟಿಗೆ ಅವಕಾಶ ಇದ್ದ ಕಾರಣ ದರ್ಶನ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಸುಮಾರು ಎರಡೂವರೆ ಗಂಟೆ ಕಾದು ಬಳಿಕ ವಾಪಸ್ ಬಂದಿದ್ದಾಗಿ ರಚಿತಾ ರಾಮ್ ಹೇಳಿದರು. ದರ್ಶನ್ ಅವರ ಆಶೀರ್ವಾದ ತಮ್ಮ ಮೇಲಿದ್ದು, ಮತ್ತೊಮ್ಮೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವುದಾಗಿ ಅವರು ತಿಳಿಸಿದರು.
ಇದೇ ವೇಳೆ ಹುಟ್ಟುಹಬ್ಬದಂದು ತಮ್ಮನ್ನು ಭೇಟಿಯಾಗಲು ಆಗಮಿಸಿದ್ದ ಅಭಿಮಾನಿಗಳಿಗೆ ರಚಿತಾ ರಾಮ್ ಧನ್ಯವಾದ ತಿಳಿಸಿದರು. ಅಭಿಮಾನಿಗಳಿಗೆ ಒಳ್ಳೆಯದನ್ನೇ ಮಾಡುವಂತೆ, ಯಾರಿಗೂ ಕೆಟ್ಟದ್ದನ್ನು ಮಾಡದಂತೆ ಸಲಹೆ ನೀಡಿದ ಅವರು, ಜೀವನವನ್ನು ಸಂತೋಷದಿಂದ ಕಳೆಯಬೇಕು ಮತ್ತು ಸಾಧ್ಯವಾದಷ್ಟು ಇತರರಿಗೆ ಸಹಾಯ ಮಾಡಬೇಕು ಎಂದು ಹೇಳಿದರು.