ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಆ್ಯಕ್ಷನ್ ಡ್ರಾಮಾ ‘ಮೈಸಾ’ ಟೀಸರ್ ಬಿಡುಗಡೆಯಾಗಿದೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಆ್ಯಕ್ಷನ್ ಡ್ರಾಮಾ ‘ಮೈಸಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚೊಚ್ಚಲ ನಿರ್ದೇಶಕ ರವೀಂದ್ರ ಪುಳ್ಳೆ ನಿರ್ದೇಶನದ ಈ ಚಿತ್ರವನ್ನು Unformula Films ನಿರ್ಮಿಸುತ್ತಿದೆ.


ಟೀಸರ್‌ನಲ್ಲಿ ರಶ್ಮಿಕಾ ಅವರು ಮೈಸಾ ಎಂಬ ಧೈರ್ಯಶಾಲಿ ಹಾಗೂ ಅಂಜದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ನಾನು ಸುಸ್ತಾಗಿದ್ದೇನೆ, ನಾನು ನಿಂತುಬಿಟ್ಟಿದ್ದೇನೆ, ನಾನು ಸೋತಿದ್ದೇನೆ” ಎಂಬ ಮಾತುಗಳೊಂದಿಗೆ ಆರಂಭವಾಗುವ ಟೀಸರ್, ಮೈಸಾಳ ಹೋರಾಟದ ಜಗತ್ತಿನ ಪರಿಚಯ ಮಾಡಿಕೊಡುತ್ತದೆ.


ಚಿತ್ರದಲ್ಲಿ ರಶ್ಮಿಕಾ ಗೋಂಡ್ ಬುಡಕಟ್ಟು ಮಹಿಳೆಯ ಪಾತ್ರ ನಿರ್ವಹಿಸಿದ್ದು, ಪಾತ್ರಕ್ಕಾಗಿ ಕಠಿಣ ದೈಹಿಕ ತರಬೇತಿ ಪಡೆದಿದ್ದಾರೆ. ಬೈಕ್ ರೈಡಿಂಗ್‌ನಿಂದ ಹಿಡಿದು ಅಂಡರ್‌ವಾಟರ್ ಆ್ಯಕ್ಷನ್ ದೃಶ್ಯಗಳವರೆಗೆ ಹಲವು ಸಾಹಸ ದೃಶ್ಯಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಈಶ್ವರಿ ರಾವ್, ಗುರು ಸೋಮಸುಂದರಂ, ರಾವ್ ರಮೇಶ್, ರಾಹುಲ್ ರವೀಂದ್ರನ್ ಮತ್ತು ಸಮುದ್ರಕನಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.


ನಿರ್ದೇಶಕ ರವೀಂದ್ರ ಪುಳ್ಳೆ ಅವರ ಕಲ್ಪನೆಗೆ ಛಾಯಾಗ್ರಾಹಕ ಶ್ರೇಯಾಸ್ ಕೆ. ಕೃಷ್ಣ ದೃಶ್ಯರೂಪ ನೀಡಿದ್ದಾರೆ. ಜೇಕ್ಸ್ ಬಿಜಾಯ್ ಹಿನ್ನೆಲೆ ಸಂಗೀತ ನೀಡಿದ್ದು, ಅಂತಾರಾಷ್ಟ್ರೀಯ ಆ್ಯಕ್ಷನ್ ಕೊರಿಯೋಗ್ರಾಫರ್ ಕೆಚಾ ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸಿದ್ದಾರೆ.

‘ಮೈಸಾ’ ಚಿತ್ರವು ತೆಲುಗು, ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.