ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಗುಣಗನಹಳ್ಳಿ ಗ್ರಾಮದಲ್ಲಿ ಹಳ್ಳದಲ್ಲಿ ಈಜಾಡಲು ತೆರಳಿದ್ದ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಆಟವಾಡಲು ತೋಟಕ್ಕೆ ತೆರಳಿದ್ದ ಇಬ್ಬರು ಮಕ್ಕಳು ಹಳ್ಳದ ನೀರಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಕನಕಪುರ ತಾಲೂಕಿನ ಗುಣಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ಶ್ರೀನಿವಾಸ್ ಹಾಗೂ ಪದ್ಮಾವತಿ ದಂಪತಿಯ ಪುತ್ರ ಮಧು (14) ಮತ್ತು ನಾರಾಯಣ್-ಮಾಧುರಿ ದಂಪತಿಯ ಪುತ್ರ ಶ್ರೀಹರಿ (8) ಎಂದು ಗುರುತಿಸಲಾಗಿದೆ.
ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದ ಗ್ರಾಮದ ಹೊರವಲಯದಲ್ಲಿದ್ದ ಹಳ್ಳದಲ್ಲಿ ನೀರು ತುಂಬಿಕೊಂಡಿತ್ತು. ನಿನ್ನೆ ತೋಟಕ್ಕೆ ಆಟವಾಡಲು ತೆರಳಿದ್ದ ಮಕ್ಕಳು ಹಳ್ಳದಲ್ಲಿ ಈಜಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ಮಾಹಿತಿ ತಿಳಿದು ಕೋಡಿಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.