ರಾಮನಗರದಲ್ಲಿ POCSO ಪ್ರಕರಣದ ಆರೋಪಿ ದೈಹಿಕ ಶಿಕ್ಷಕ ಶಶಿಧರ್, ಎಸ್‌ಪಿ ಕಚೇರಿಯ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. 

ರಾಮನಗರ: ಎಸ್‌ಪಿ ಕಚೇರಿ ಕಟ್ಟಡದಿಂದ ಬಿದ್ದು POCSO ಪ್ರಕರಣದ ಆರೋಪಿಯಾಗಿದ್ದ ದೈಹಿಕ ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಮೃತರನ್ನು ಚನ್ನಪಟ್ಟಣ ತಾಲೂಕಿನ ಅಕ್ಕೂರು ಹೊಸಹಳ್ಳಿ ಗ್ರಾಮದ ಶಶಿಧರ್ ಎಂದು ಗುರುತಿಸಲಾಗಿದೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಶಶಿಧರ್ ವಿರುದ್ಧ ಕೇಳಿಬಂದಿತ್ತು. ಈ ಸಂಬಂಧ ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶಶಿಧರ್ ಅವರನ್ನು ಬಂಧಿಸಿದ್ದರು

.

ಹೆಚ್ಚಿನ ವಿಚಾರಣೆಗಾಗಿ ಇಂದು ಬೆಳಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಬೆರಳಚ್ಚು ಪಡೆಯುವ ಸಲುವಾಗಿ ಅವರನ್ನು ಎಸ್‌ಪಿ ಕಚೇರಿಗೆ ಕರೆತರಲಾಗಿತ್ತು ಎನ್ನಲಾಗಿದೆ. ಈ ವೇಳೆ ಅವರು ಕಚೇರಿ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.

ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಶಶಿಧರ್ ವಿರುದ್ಧ POCSO ಪ್ರಕರಣ ದಾಖಲಾಗಿತ್ತು. ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.