ರಾಮನಗರದ ಕನಕಪುರ ಬೈಪಾಸ್ ರಸ್ತೆಯ ಗಡಸಳ್ಳಿ ಬಳಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ರಜೆಯ ಮೇಲೆ ಊರಿಗೆ ಬಂದಿದ್ದ ITBP ಯೋಧ ಚನ್ನವೀರೇಗೌಡ (45) ಮೃತಪಟ್ಟಿದ್ದಾರೆ.

ರಾಮನಗರ: ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ ITBP ಯೋಧ ಮೃತಪಟ್ಟಿರುವ ಘಟನೆ ಕನಕಪುರ ಬೈಪಾಸ್ ರಸ್ತೆಯ ಗಡಸಳ್ಳಿ ಬಳಿ ತಡರಾತ್ರಿ ನಡೆದಿದೆ.


ಮೃತರನ್ನು ಕನಕಪುರ ತಾಲೂಕಿನ ಶಿವನಹಳ್ಳಿ ನಿವಾಸಿ ಚನ್ನವೀರೇಗೌಡ (45) ಎಂದು ಗುರುತಿಸಲಾಗಿದೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯ ಯೋಧರಾಗಿದ್ದ ಚನ್ನವೀರೇಗೌಡ ಅವರು ಕೆಲ ದಿನಗಳ ಹಿಂದಷ್ಟೇ ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು.


ತಡರಾತ್ರಿ ಮಗನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಗಡಸಳ್ಳಿ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಚನ್ನವೀರೇಗೌಡ ಅವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.


ಆದರೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಯೋಧ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಿಬ್ಬಂದಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಕನಕಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.