ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ 25 ಕ್ವಿಂಟಾಲ್ ತೂಕದ ಗಣೇಶ ಮೂರ್ತಿ ಸಾಗಿಸುವ ವೇಳೆ ವಿದ್ಯುತ್ ತಂತಿ ತಗುಲಿ ಮೂರ್ತಿ ಉರುಳಿದೆ.
ರಾಯಚೂರು: ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕೊಂಡೊಯ್ಯುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಮೂರ್ತಿ ಉರುಳಿಬಿದ್ದು, ವಿದ್ಯುತ್ ಅವಘಡದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು 27 ವರ್ಷದ ಪ್ರೇಮ್ ಕುಮಾರ್ ಎಂದು ಗುರುತಿಸಲಾಗಿದೆ. ಸುಮಾರು 25 ಕ್ವಿಂಟಾಲ್ ತೂಕದ ಗಣೇಶ ಮೂರ್ತಿಯನ್ನು ಲಾರಿಯಲ್ಲಿ ಪ್ರತಿಷ್ಠಾಪನಾ ಸ್ಥಳಕ್ಕೆ ಕೊಂಡೊಯ್ಯಲಾಗುತ್ತಿತ್ತು.
ಈ ವೇಳೆ ರಸ್ತೆಯ ಮೇಲಿದ್ದ ವಿದ್ಯುತ್ ತಂತಿ ಗಣೇಶ ಮೂರ್ತಿಯ ತಲೆ ಭಾಗಕ್ಕೆ ತಗುಲಿದೆ. ವಿದ್ಯುತ್ ತಂತಿ ತಗುಲಿದ ಪರಿಣಾಮ ಗಣೇಶ ಮೂರ್ತಿ ಉರುಳಿಬಿದ್ದಿದೆ.
ಮೂರ್ತಿ ಉರುಳಿಬಿದ್ದ ರಭಸಕ್ಕೆ ವಿದ್ಯುತ್ ತಂತಿ ಕಟ್ ಆಗಿ ಲಾರಿಯ ಮೇಲೆ ಬಿದ್ದಿದೆ. ಈ ವೇಳೆ ಲಾರಿಯಲ್ಲಿ ಮಲಗಿದ್ದ ಪ್ರೇಮ್ ಕುಮಾರ್ಗೆ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಸಂದರ್ಭದಲ್ಲಿ ಲಾರಿಯಲ್ಲಿದ್ದ ಇತರ ಯುವಕರು ತಕ್ಷಣ ಕೆಳಗೆ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಆದರೆ ಲಾರಿಯಲ್ಲಿ ಮಲಗಿದ್ದ ಪ್ರೇಮ್ ಕುಮಾರ್ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ದುರಂತ ಅಂತ್ಯ ಕಂಡಿದ್ದಾರೆ.
ಘಟನೆಯಿಂದ ರಸ್ತೆಗೆ ಉರುಳಿಬಿದ್ದಿದ್ದ ಬೃಹತ್ ಗಣೇಶ ಮೂರ್ತಿಯನ್ನು ಬಳಿಕ ತೆರವುಗೊಳಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಚೂರಿನ RIMS ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಈ ಘಟನೆ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಗಣೇಶ ಹಬ್ಬದ ಸಂಭ್ರಮದ ನಡುವೆ ಸಂಭವಿಸಿದ ಈ ದುರಂತ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.