ಹೊಸಬರೇ ಸೇರಿ ನಿರ್ಮಿಸಿರುವ ಕನ್ನಡದ ‘ಪ್ರೇಮದ ಊರಲಿ’ ಸಿನಿಮಾ ರಾಜ್ಯದಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಇದೀಗ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆಯುತ್ತಿದೆ.

ಕನ್ನಡದ ಸಣ್ಣ ಸಿನಿಮಾ ‘ಪ್ರೇಮದ ಊರಲಿ’ ಇದೀಗ ಕರ್ನಾಟಕ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆಯುತ್ತಿದೆ. ಸಿನಿಮಾ ಕುರಿತು ದೇಶದಾದ್ಯಂತ ಜನರು ಮಾಹಿತಿ ಹುಡುಕಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ‘ಪ್ರೇಮದ ಊರಲಿ’ ಇಂಡಿಯಾ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.


ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ಈ ಸಿನಿಮಾ ಯಾವುದೇ ದೊಡ್ಡ ಸ್ಟಾರ್‌ಗಳ ಬೆಂಬಲವಿಲ್ಲದೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಬಿಡುಗಡೆಯಾಗಿ ಎರಡು ವಾರಗಳಾಗಿದ್ದು, ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ ಎನ್ನಲಾಗಿದೆ.


ಸಿನಿಮಾದ ಕಲೆಕ್ಷನ್, ಕಲಾವಿದರು, ಕಥೆ, ನಿರ್ದೇಶನ ಹಾಗೂ ಬುಕಿಂಗ್ ಕುರಿತು ಜನರು ಅಂತರ್ಜಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಅಕ್ಟೋಬರ್ 6ರಂದು ಕೂಡ ಸಿನಿಮಾ ಮೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ವರದಿಯಾಗಿದೆ.


ಈಗಾಗಲೇ ‘ಪ್ರೇಮದ ಊರಲಿ’ ತೆಲುಗಿನಲ್ಲಿ ‘ಪ್ರೇಮನೆ ಊರಿಲೊ’ ಹೆಸರಿನಲ್ಲಿ ಬಿಡುಗಡೆಯಾಗಿದ್ದು, ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನವೂ ನಡೆಯುತ್ತಿದೆ. ಜಯಣ್ಣ ಕಂಬೈನ್ಸ್, ಕೆಆರ್‌ಜಿ ಸೇರಿದಂತೆ ಕೆಲವರು ಈ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ ಎನ್ನಲಾಗಿದೆ.

ದೊಡ್ಡ ಬಜೆಟ್ ಅಥವಾ ಸ್ಟಾರ್‌ಗಳಿಗಿಂತ ಉತ್ತಮ ಕಥೆ, ನಿರೂಪಣೆ, ಮೇಕಿಂಗ್ ಹಾಗೂ ಸಂಗೀತ ಪ್ರೇಕ್ಷಕರನ್ನು ಸೆಳೆಯಬಲ್ಲದು ಎಂಬುದಕ್ಕೆ ‘ಪ್ರೇಮದ ಊರಲಿ’ ಯಶಸ್ಸು ಉದಾಹರಣೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.