ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್ನಲ್ಲಿ ಸ್ಮಾರ್ಟ್ಫೋನ್ ಪತ್ತೆಯಾದ ಪ್ರಕರಣದ ತನಿಖೆ ಮುಂದುವರಿದಿದೆ. ಮಾಜಿ ಸಂಸದ Prajwal revanna ಪೊಲೀಸರ ವಿಚಾರಣೆಗೆ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ಗೆ ಅಪೀಲ್ ಮಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್ನಲ್ಲಿ ಸ್ಮಾರ್ಟ್ಫೋನ್ ಪತ್ತೆಯಾದ ಪ್ರಕರಣದ ತನಿಖೆ ಮುಂದುವರಿದಿದ್ದು, ಈ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ವಿಚಾರಣೆ ವೇಳೆ Prajwal Revanna ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದ್ದು, ‘ನೀವು ಯಾರ ಜೊತೆ ಮಾತನಾಡುತ್ತಿದ್ದೀರಿ ಎಂದು ಗೊತ್ತಾ?’ ಎಂದು ಪ್ರಶ್ನಿಸಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ, ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ಪ್ರಕರಣ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿ, ಕೋರ್ಟ್ಗೆ ಅಪೀಲ್ ಹೋಗುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
‘ನಾನು ಮಾಜಿ ಸಂಸದ, ಮಾಜಿ ಪ್ರಧಾನಿಯ ಮೊಮ್ಮಗ. ನನ್ನನ್ನು ಸಿಕ್ಕಿಸಲು ಪ್ರಯತ್ನಿಸಲಾಗುತ್ತಿದೆ. ನಾನು ಏನೂ ಹೇಳುವುದಿಲ್ಲ, ಏನು ಬೇಕಾದರೂ ಮಾಡಿಕೊಳ್ಳಿ’ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ ಎನ್ನಲಾಗಿದೆ.
ಮೊಬೈಲ್ ಪತ್ತೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನ
ಜೈಲಿನ ಬ್ಯಾರಕ್ನಲ್ಲಿ ಮೊಬೈಲ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ರಾಯ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಎರಡು ದಿನಗಳ ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ವಿಚಾರಣೆ ಬಳಿಕ 2ನೇ ಎಸಿಜೆಎಂ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ವರದಿಯಾಗಿದೆ.
ಜೈಲಿನ ಮೇಲೆ CCB ದಾಳಿ
ಜೈಲಿನಲ್ಲಿರುವ ರೌಡಿಗಳು ಹೊರಗಿನ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವುದು ಹಾಗೂ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಆಗಸ್ಟ್ 11ರಂದು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿದ್ದರು.
ಈ ವೇಳೆ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾಗಿತ್ತು ಎನ್ನಲಾಗಿದೆ.
ಮೊಬೈಲ್ ಜೈಲಿನೊಳಗೆ ಬಂದಿದ್ದು ಹೇಗೆ?
ಮೊಬೈಲ್ ಫೋನ್ ಜೈಲಿನ ಬ್ಯಾರಕ್ಗೆ ಹೇಗೆ ಬಂತು ಎಂಬುದರ ಕುರಿತು ತನಿಖೆ ನಡೆಸಲು ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಜೈಲಿನೊಳಗೆ ಮೊಬೈಲ್ ಬಂದಿರುವುದರ ಹಿಂದಿನ ಕಾರಣ ಹಾಗೂ ಇದರಲ್ಲಿ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದರು.
ಪ್ರಕರಣದ ತನಿಖೆ ಮುಂದುವರಿದಿದ್ದು, ಮೊಬೈಲ್ ಬಳಕೆ ಹಾಗೂ ಅದು ಜೈಲಿನೊಳಗೆ ಬಂದಿರುವ ಕುರಿತು ಪೊಲೀಸರು ಮತ್ತು ಕಾರಾಗೃಹ ಇಲಾಖೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದೆ.