ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಕ್ಸಲ್ ಹೆಸರಿನಲ್ಲಿ ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದ ಆರೋಪದ ಮೇಲೆ ಕನಕಲಬಂಡೆ ವೆಂಕಟೇಶ್ ಅಲಿಯಾಸ್ ‘ಸುಡೋ ನಕ್ಸಲ್’ನನ್ನು ಪೊಲೀಸರು ಬಂಧಿಸಿದ್ದಾರೆ. 

ತುಮಕೂರು: ಹಲವು ತಿಂಗಳಿಂದ ಪಾವಗಡ ತಾಲೂಕಿನ ಕನಕಲಬಂಡೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಕ್ಸಲ್ ಹೆಸರಿನಲ್ಲಿ ಬೆದರಿಕೆ ಹಾಕುತ್ತಿದ್ದ ಆರೋಪ ಎದುರಿಸುತ್ತಿದ್ದ ಕನಕಲಬಂಡೆ ವೆಂಕಟೇಶ್ ಅಲಿಯಾಸ್ ‘ಸುಡೋ ನಕ್ಸಲ್’ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಪಾವಗಡ ಸಮೀಪದ ಕಡಮಲಕುಂಟೆ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ವೆಂಕಟೇಶ್‌ನನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಆತ ಅರೆಬೆತ್ತಲೆಯಾಗಿ ಎಣ್ಣೆ ಹಚ್ಚಿಕೊಂಡು ಚಿಕನ್ ಸೇವಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕನಕಲಬಂಡೆ ಗ್ರಾಮದಲ್ಲಿ ಕಳೆದ ಕೆಲ ತಿಂಗಳಿಂದ ದೌರ್ಜನ್ಯ ಹಾಗೂ ಬೆದರಿಕೆ ಹಾಕುತ್ತಿದ್ದ ಆರೋಪ ವೆಂಕಟೇಶ್ ವಿರುದ್ಧ ಕೇಳಿಬಂದಿತ್ತು. ಆಗಸ್ಟ್ 29ರಂದು ರೈತ ಕರಿಯಣ್ಣ ಅವರ ಪಂಪ್‌ಸೆಟ್‌ಗೆ ನಾಡಬಾಂಬ್ ಇಟ್ಟು ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿದೆ.

ಇತ್ತೀಚೆಗೆ ಗಂಗಸಾಗರ ಗ್ರಾಮದ ರೈತನಿಗೆ ‘ಪೀಪಲ್ಸ್ ವಾರ್ ದಳಂ’ ಹೆಸರಿನಲ್ಲಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟು ಪತ್ರ ಅಂಟಿಸಿದ್ದ ಪ್ರಕರಣದಲ್ಲೂ ವೆಂಕಟೇಶ್ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.

ಅಡಿಷನಲ್ ಎಸ್‌ಪಿ ಗೋಪಾಲಯ್ಯ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಮಂಜುನಾಥ್ ನೇತೃತ್ವದಲ್ಲಿ ಪಾವಗಡ ಇನ್ಸ್‌ಪೆಕ್ಟರ್ ಸುರೇಶ್, ಗ್ರಾಮಾಂತರ ಇನ್ಸ್‌ಪೆಕ್ಟರ್ ಕೊಟ್ರೇಶ್, ಎಸ್‌ಐ ಸುನಿಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ವೆಂಕಟೇಶ್ ಬಂಧನದ ಬಳಿಕ ಕನಕಲಬಂಡೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಈತನ ವಿರುದ್ಧ ಕೇಳಿಬಂದಿರುವ ವಿವಿಧ ಆರೋಪಗಳ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.