PAVAGADAದಲ್ಲಿ ಮತ್ತೆ ನಕ್ಸಲ್ ಸದ್ದು? 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಪತ್ರ ಅಂಟಿಸಿದ ಆರೋಪ


ತುಮಕೂರು ಜಿಲ್ಲೆಯ ಗಡಿ ತಾಲೂಕಾದ ಪಾವಗಡದಲ್ಲಿ ಮತ್ತೆ ನಕ್ಸಲ್‌ ಚಟುವಟಿಕೆ ಕಾರ್ಯಾಚರಣೆ ಆರಂಭಿಸಿರೋ ಅನುಮಾನ ಶುರುವಾಗಿದೆ. ನಿನ್ನೆ ರಾತ್ರಿ ಪಾವಗಡ ತಾಲೂಕಿನ ಗಂಗಸಾಗರದ ರೈತರ ಜಮೀನಿನಲ್ಲಿ ಪೀಪಲ್ಸ್‌ ವಾರ್‌ ಜನಶಕ್ತಿ ಪಾರ್ಟಿ ಹೆಸರಿನಲ್ಲಿ 5 ಲಕ್ಷ ಬೇಡಿಕೆಯಿಟ್ಟ ಪತ್ರವನ್ನು ತೋಟದ ಗೇಟ್‌ಗೆ ಅಂಟಿಸಿ ಪರಾರಿ ಆಗಿದ್ದಾರೆ ಎಂದು ಹೇಳಲಾಗ್ತಿದೆ.


ಇನ್ನು ಆ ಪತ್ರದಲ್ಲಿ ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿ, ಕಾಮ್ರೇಡ್‌ ದೇವನ್ನ ದಳಂ ಆಂಧ್ರ ಪ್ರದೇಶ್ ಎಂಬ ವಿಳಾಸ ಇದೆ.  ಪಾವಗಡ ತಾಲೂಕಿನ ಗಂಗಸಾಗರದ ವಾಸಿಯಾದ ಮುತ್ತ ಕುಂಟ್ಲ ಭೂಷಪ್ಪ ಅವರಿಗೆ ಕಾಡ್ ದೇವನ್ನ ಮಾಡುವ ನಮಸ್ಕಾರಗಳು. ಸ್ವಚ್ಛ ಸಮಾಜ ಹಾಗೂ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ನಮ್ಮ ಹೋರಾಟ ಮುಂದುವರಿಯುತ್ತಿದೆ. ಎಲ್ಲಿ ದೌರ್ಜನ್ಯ, ದಬ್ಬಾಳಿಕೆ ಹಾಗೂ ಬಡವರ ಮೇಲೆ ವಿನಾ ಕಾರಣ ದಾಳಿ ನಡೆಸಿದರೆ, ಅಲ್ಲಿ ಸಂಘಟನೆ ನಮ್ಮದೇ ಅದ ರೀತಿಯಲ್ಲಿ ಕಾರ್ಯನಿರ್ವಹಿಸಿ ಅನ್ಯಾಯ ಮತ್ತು ದೌರ್ಜನ್ಯಕ್ಕೆ ಒಳಗಾದ ಬಡ ಹಾಗೂ ಕಾರ್ಮಿಕರ ಪರ ಕೆಲಸ ಮಾಡಿ ರಕ್ಷಣೆ ಹಾಗೂ ನ್ಯಾಯ ಕಲ್ಪಿಸಲಾಗುತ್ತಿದೆ. ಇದೇ ಗ್ರಾಮದ ಉಪ್ಪಾರ ವೆಂಕಟೇಶ್‌ ಮೇಲೆ ಗುಂಡಾಗಿರಿ ಹಾಗೂ ದೌರ್ಜನ್ಯ ನಡೆಯುತ್ತಿದ್ದು, ಅವರಿಗೆ ಹಿಂಸೆ ಕೊಡುತ್ತಿದ್ದಾರೆ. ಅವರ ನೋವಿಗೆ ಸ್ಪಂದಿಸಿ, ಕಾಮ್ರೇಡ್‌ ದೇವನ್ನ ದಳಂ ಪಾರ್ಟಿ ತಾಲೂಕಿಗೆ ಪ್ರವೇಶ ಮಾಡಿದ್ದು, ಕನಿಕಲಬಂಡೆ ಗ್ರಾಮದಲ್ಲಿದೌರ್ಜನ್ಯ ನಡೆಸುತ್ತಿರುವವರ ಮಾಹಿತಿ ಸಂಗ್ರಹಿಸಲಾಗಿದೆ. ಶೀಘ್ರ ಅವರ ದೌರ್ಜನ್ಯ ಮಟ್ಟ ಹಾಕಲಿದ್ದೇವೆ. ಈ ವಿಷಯ ಪೊಲೀಸರಿಗಾಗಲಿ ಅಥವಾ ಯಾರಿಗಾ ದರೂ ಹೇಳಿದರೆ ಅದರ ಮುಂದಿನ ಅನಾಹುತ ಎದುರಿಸಬೇಕಾಗಿದೆ' ಎಂದು ಪತ್ರದಲ್ಲಿ ವಿವರಿಸಲಾಗಿದೆ.



ಇನ್ನು ತೋಟದ ಬಳಿ ಹೋಗಿದ್ದ ವೇಳೆ ರೈತನಿಗೆ ಪತ್ರ ಕಾಣಿಸಿದ್ದು, ನಿಜವಾಗಿಯೂ ಅದೇ ಸಂಘಟನೆಯ ಪತ್ರವೇ ಅಥವಾ ಅವರ ಹೆಸರಿನಲ್ಲಿ ಯಾರಾದರೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪಾವಗಡ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಲಾಗಿದ್ದು, ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ.