KMF ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪರಿಷ್ಕರಿಸಿದೆ. ನವೆಂಬರ್ 1ರಿಂದ ಹೊಸ ದರ ಜಾರಿ..
ಹಾಲಿನ ದರ ಏರಿಕೆಯ ಬೆನ್ನಲ್ಲೇ ಇದೀಗ ನಂದಿನಿ ಮೊಸರಿನ ಬೆಲೆಯೂ ಹೆಚ್ಚಳವಾಗಿದೆ. ಕರ್ನಾಟಕ ಹಾಲು ಮಹಾಮಂಡಳಿ (KMF) ಹಾಲು ಮತ್ತು ಮೊಸರಿನ ಪರಿಷ್ಕೃತ ಮಾರಾಟ ದರದ ಆದೇಶ ಹೊರಡಿಸಿದ್ದು, ನವೆಂಬರ್ 1ರಿಂದಲೇ ಹೊಸ ದರ ಜಾರಿಗೆ ಬರಲಿದೆ.
ಪರಿಷ್ಕೃತ ದರದ ಪ್ರಕಾರ, ಅರ್ಧ ಕೆಜಿ ಮೊಸರಿನ ಬೆಲೆ 28 ರೂಪಾಯಿಯಿಂದ 34 ರೂಪಾಯಿಗೆ ಏರಿಕೆಯಾಗಿದೆ. ಒಂದು ಕೆಜಿ ಮೊಸರಿನ ಬೆಲೆ 54 ರೂಪಾಯಿಯಿಂದ 68 ರೂಪಾಯಿಗೆ ಹೆಚ್ಚಳವಾಗಿದೆ. ಅಂದರೆ ಒಂದು ಕೆಜಿ ಮೊಸರಿನ ದರದಲ್ಲಿ 14 ರೂಪಾಯಿ ಏರಿಕೆಯಾಗಿದೆ.
ಇನ್ನು ವಿವಿಧ ಮಾದರಿಯ ಹಾಲಿನ ದರವೂ ಹೆಚ್ಚಳವಾಗಿದೆ. ಟೋನ್ಡ್ ಹಾಲಿನ ಬೆಲೆ 46 ರೂಪಾಯಿಯಿಂದ 54 ರೂಪಾಯಿಗೆ, ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ದರ 47ರಿಂದ 56 ರೂಪಾಯಿಗೆ ಏರಿಕೆಯಾಗಿದೆ. ಹೋಮೋಜಿನೈಸ್ಡ್ ಹಸುವಿನ ಹಾಲು 50ರಿಂದ 58 ರೂಪಾಯಿಗೆ ಹೆಚ್ಚಳವಾಗಿದೆ. ಸ್ಪೆಷಲ್ ಟೋನ್ಡ್ ಮತ್ತು ಶುಭಂ ಹಾಲಿನ ದರ 52ರಿಂದ 64 ರೂಪಾಯಿಗೆ ಪರಿಷ್ಕರಣೆಯಾಗಿದೆ.
KMF ಪ್ರಕಟಣೆಯ ಪ್ರಕಾರ, ಹೈನುಗಾರಿಕೆ ವೆಚ್ಚ ಹೆಚ್ಚಳ ಮತ್ತು ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹಾಲಿನ ಖರೀದಿ ದರ ಹೆಚ್ಚಿಸುವಂತೆ ಮನವಿ ಮಾಡಲಾಗಿತ್ತು. ಸಚಿವ ಸಂಪುಟದ ನಿರ್ಧಾರದಂತೆ ಟೋನ್ಡ್ ಹಾಲಿನ ಮಾರಾಟ ದರದಲ್ಲಿ ಪ್ರತಿ ಲೀಟರ್ಗೆ 8 ರೂಪಾಯಿ ಹೆಚ್ಚಳ ಮಾಡಿ, ಅದರಲ್ಲಿ 7 ರೂಪಾಯಿಯನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಲು ಸೂಚಿಸಲಾಗಿದೆ.
ಒಟ್ಟಿನಲ್ಲಿ ನವೆಂಬರ್ 1ರಿಂದ ನಂದಿನಿ ಹಾಲು ಮತ್ತು ಮೊಸರು ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಹಣದ ಹೊರೆ ಬೀಳಲಿದೆ.