ಖುಷಿ ರವಿ, ರೋಷಿಣಿ ಪ್ರಕಾಶ್, ಸಂಗೀತಾ ಭಟ್ ಮತ್ತು ಸಿಂಧು ಶ್ರೀನಿವಾಸಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮಹಿಳಾ ಪ್ರಧಾನ ಕನ್ನಡ ಸಿನಿಮಾ ‘ನಾಕುತಂತಿ’ ಟೀಸರ್ ಬಿಡುಗಡೆಯಾಗಿದೆ.
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರದೊಂದಿಗೆ ‘ನಾಕುತಂತಿ’ ಸಿನಿಮಾ ಸಿದ್ಧವಾಗುತ್ತಿದೆ. ಖುಷಿ ರವಿ, ರೋಷಿಣಿ ಪ್ರಕಾಶ್, ಸಂಗೀತಾ ಭಟ್ ಮತ್ತು ಸಿಂಧು ಶ್ರೀನಿವಾಸಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಮಹಿಳಾ ಪ್ರಧಾನ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿದೆ.
ಈ ಚಿತ್ರದ ವಿಶೇಷವೆಂದರೆ ನಾಲ್ವರು ನಿರ್ದೇಶಕರು ನಾಲ್ಕು ವಿಭಿನ್ನ ಕಥೆಗಳನ್ನು ನಿರ್ದೇಶಿಸಿರುವುದು. ಗೌತಮ್ ಅನ್ವಿತ್, ಮಹೇಶ್ ರಾಜ್, ಶಶಿಕುಮಾರ್ ವಿ ಮತ್ತು ಪ್ರೀತಮ್ ಶಿವಕುಮಾರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಟೀಸರ್ ಅನ್ನು ನಾಲ್ವರು ಯುವ ಪತ್ರಕರ್ತೆಯರು ಅನಾವರಣಗೊಳಿಸಿದ್ದಾರೆ.
ಚಿತ್ರದಲ್ಲಿ ಸಿಂಧು ಶ್ರೀನಿವಾಸಮೂರ್ತಿ ಮಹಿಳಾ ಟ್ರಾಫಿಕ್ ಪೊಲೀಸ್ ಆಗಿ ಕಾಣಿಸಿಕೊಂಡರೆ, ಖುಷಿ ರವಿ ನರ್ಸ್ ಪಾತ್ರದಲ್ಲಿ ನಟಿಸಿದ್ದಾರೆ. ರೋಷಿಣಿ ಪ್ರಕಾಶ್ ಐಟಿ ಉದ್ಯೋಗಿಯಾಗಿ ಹಾಗೂ ಸಂಗೀತಾ ಭಟ್ ಮಧ್ಯಮ ವರ್ಗದ ಗೃಹಿಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಂಕಷ್ಟಗಳನ್ನು ಎದುರಿಸುವ ನಾಲ್ವರು ಮಹಿಳೆಯರ ಬದುಕಿನ ಕಥೆ ಚಿತ್ರದಲ್ಲಿದೆ.
ಸುರಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಜಯರಾಮ ದೇವಸಮುದ್ರ ಚಿತ್ರವನ್ನು ನಿರ್ಮಿಸಿದ್ದು, ಯೋಗೇಶ್ ಬಸವನಗೌಡ ಮತ್ತು ನಂಬೂರು ಸಾಯಿ ಸಹ ನಿರ್ಮಾಪಕರಾಗಿದ್ದಾರೆ. ಸುಮೇಧ್ ಕೆ ಸಂಗೀತ ನೀಡಿದ್ದು, ರೊನದ ಬಕ್ಕೇಶ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ.