ಮೈಸೂರು ಜಿಲ್ಲೆಯ ನಂಜನಗೂಡಿನ JSS ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಕಾರು ಡಿಕ್ಕಿಯಾಗಿ 19 ವರ್ಷದ ಪ್ರಿತೇಶ್ ಜೈನ್ ಮೃತಪಟ್ಟಿದ್ದಾರೆ.
ಮೈಸೂರು: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ 19 ವರ್ಷದ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಂಜನಗೂಡಿನ JSS ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ ನಡೆದಿದೆ. ಮೃತರನ್ನು ಪ್ರಿತೇಶ್ ಜೈನ್ ಎಂದು ಗುರುತಿಸಲಾಗಿದೆ.
ಪ್ರಿತೇಶ್ ಜೈನ್ ಕೋರ್ಸ್ ಪೂರ್ಣಗೊಳಿಸಿ ಉದ್ಯೋಗಕ್ಕೂ ಆಯ್ಕೆಯಾಗಿದ್ದರು. ನೇಮಕಾತಿ ಪತ್ರ ಪಡೆಯಲು ಕಾಲೇಜಿಗೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾಲೇಜು ಮುಂಭಾಗದಲ್ಲಿ ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತದ ಬಳಿಕ ಕಾರು ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಪಘಾತದ ದೃಶ್ಯ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಪೊಲೀಸರು ಬೆಂಗಳೂರು ನೋಂದಣಿಯ ಕಾರನ್ನು ವಶಕ್ಕೆ ಪಡೆದಿದ್ದು, ಪರಾರಿಯಾಗಿರುವ ಚಾಲಕನಿಗಾಗಿ ತನಿಖೆ ಮುಂದುವರಿಸಿದ್ದಾರೆ.