ಕರ್ನಾಟಕದಲ್ಲಿ ಹಾಲಿನ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಪ್ರತಿ ಲೀಟರ್ಗೆ ₹8 ಹೆಚ್ಚಳಕ್ಕೆ ಹಾಲು ಉತ್ಪಾದಕರು ಆಗ್ರಹಿಸಿದ್ದು, ಸೆಪ್ಟೆಂಬರ್ 22ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಕರ್ನಾಟಕದಲ್ಲಿ ಹಾಲಿನ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಎದುರಾಗಿದೆ. ಪ್ರತಿ ಲೀಟರ್ಗೆ ₹8ರಷ್ಟು ದರ ಹೆಚ್ಚಳ ಮಾಡಬೇಕು ಎಂದು ಹಾಲು ಉತ್ಪಾದಕರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಹಾಲಿನ ದರ ಏರಿಕೆ ಮತ್ತಷ್ಟು ಹೊರೆ ಬೀರುವ ಸಾಧ್ಯತೆ ಇದೆ.
ಬಮುಲ್, ಚಮುಲ್, ಮಂಡ್ಯ ಮಿಲ್ಕ್ ಹಾಗೂ ತುಮಕೂರು ಸೇರಿದಂತೆ ವಿವಿಧ ಹಾಲು ಒಕ್ಕೂಟಗಳು ದರ ಹೆಚ್ಚಳಕ್ಕೆ ಒತ್ತಾಯಿಸಿವೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಲಿನ ದರ ಪರಿಷ್ಕರಣೆ ಮಾಡಬೇಕೆಂಬುದು ಉತ್ಪಾದಕರ ಪ್ರಮುಖ ಬೇಡಿಕೆಯಾಗಿದೆ.
ಇನ್ನು ದರ ಏರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಹಾಲು ಉತ್ಪಾದಕರು ಸಜ್ಜಾಗಿದ್ದಾರೆ. ಸೆಪ್ಟೆಂಬರ್ 22ರಂದು ರಾಜ್ಯಾದ್ಯಂತ ರೈತರು ಒಗ್ಗಟ್ಟಾಗಿ ಒತ್ತಡ ಹೇರಲು ಕರೆ ನೀಡಲಾಗಿದೆ. ಮೂರು ದಿನಗಳ ಒಳಗೆ ಹಾಲಿನ ದರ ಹೆಚ್ಚಳ ಮಾಡದಿದ್ದರೆ ಪ್ರತಿ ಜಿಲ್ಲೆಯಿಂದ ‘ವಿಧಾನಸೌಧ ಚಲೋ’ ನಡೆಸುವುದಾಗಿ ಸರ್ಕಾರಕ್ಕೆ ಗಡುವು ನೀಡಲಾಗಿದೆ ಎಂದು ಕೆಎಂಎಫ್ ಮಾಜಿ ನಿರ್ದೇಶಕ ವೀರಭದ್ರಬಾಬು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ತೀವ್ರ ಬರಗಾಲ ಹಾಗೂ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದ ಹಸಿರು ಮತ್ತು ಒಣ ಹುಲ್ಲಿನ ಕೊರತೆ ಎದುರಾಗಿದೆ. ಇದರ ಜೊತೆಗೆ ಪಶು ಆಹಾರ ತಯಾರಿಕೆಗೆ ಬಳಸುವ ಮೆಕ್ಕೆಜೋಳ, ಇಂಡಿ ಬೂಸಾ ಮತ್ತು ಕಾಕಂಬಿ ಸೇರಿದಂತೆ ಕಚ್ಚಾ ಸಾಮಗ್ರಿಗಳ ಬೆಲೆ ಸುಮಾರು ಶೇ.25ರಷ್ಟು ಏರಿಕೆಯಾಗಿದೆ ಎಂದು ಉತ್ಪಾದಕರು ಹೇಳಿದ್ದಾರೆ.
ರಾಸುಗಳಿಗೆ ಬಳಸುವ ನೆಲಹಾಸು ಸೇರಿದಂತೆ ವಿವಿಧ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿದ್ದು, ಸಾಗಾಟ ವೆಚ್ಚವೂ ಏರಿಕೆಯಾಗಿದೆ. ಈ ಎಲ್ಲ ಕಾರಣಗಳಿಂದ ಹಾಲು ಉತ್ಪಾದಕರಿಗೆ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಅದನ್ನು ಸರಿದೂಗಿಸಲು ಹಾಲಿನ ದರ ಹೆಚ್ಚಳ ಅಗತ್ಯ ಎಂದು ಹಾಲು ಒಕ್ಕೂಟಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ.