ಸಚಿವ ಸಂಪುಟ ಸಭೆ ಹಿನ್ನೆಲೆ ಮಂಗಳೂರಿಗೆ ಆಗಮಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ದೇವಾನುದೇವತೆಗಳ ಮೇಲೆ ಅಪಾರ ನಂಬಿಕೆ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ!
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಆಗಮಿಸಿರುವ ಡಿ.ಕೆ. ಶಿವಕುಮಾರ್, ಶತಮಾನಗಳಷ್ಟು ಪುರಾತನವಾದ ಕದ್ರಿ ದೇವಸ್ಥಾನಕ್ಕೆ ತೆರಳಿ ಗಣಪತಿ ದೇವರು ಹಾಗೂ ದುರ್ಗಾಪರಮೇಶ್ವರಿ ಅಮ್ಮನವರ ದರ್ಶನ ಪಡೆದರು.
ಬಳಿಕ ಕದ್ರಿ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಾಡಿನ ಸಮಸ್ತ ಜನರ ಒಳಿತಿಗಾಗಿ, ಮಳೆ-ಬೆಳೆ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು. ಈ ಕುರಿತ ಫೋಟೋಗಳನ್ನು ತಮ್ಮ ಎಕ್ಸ್ (X) ಖಾತೆಯಲ್ಲೂ ಹಂಚಿಕೊಂಡಿದ್ದಾರೆ.
ಇನ್ನು ದೇವಸ್ಥಾನಕ್ಕೆ ತೆರಳುವ ಮುನ್ನ ತಣ್ಣೀರುಬಾವಿ ಬೀಚ್ನಲ್ಲಿ ಆಯೋಜಿಸಲಾಗಿದ್ದ ಔತಣ ಕೂಟದಲ್ಲಿ ಡಿ.ಕೆ. ಶಿವಕುಮಾರ್ ಭಾಗಿ1ಯಾದರು. ತುಳುನಾಡಿನ ದೈವಾರಾಧನೆ, ಕಂಬಳದ ನೇಗಿಲು ಹಾಗೂ ಸಾಂಪ್ರದಾಯಿಕ ಪರಿಕರಗಳನ್ನು ವೀಕ್ಷಿಸಿ ಸಂತಸಪಟ್ಟರು. ಕೊಂಬು ಊದಿ, ದೈವದ ಗಗ್ಗರ ಹಿಡಿದು ಸಂಭ್ರಮಿಸಿದ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.