ಗುಬ್ಬಿಯಲ್ಲಿ ಲೋಕಾಯುಕ್ತ ಭರ್ಜರಿ ಟ್ರ್ಯಾಪ್‌..!ರೆಡ್‌ಹ್ಯಾಂಡ್‌ ಆಗಿ  ತಗ್ಲಾಕೊಂಡ ಅರಣ್ಯಾಧಿಕಾರಿ 

ಅರಣ್ಯ ಇಲಾಖೆಯಿಂದ ಮಂಜೂರಾಗಿದ್ದ ಕಾಮಗಾರಿಯ ಟೆಂಡರ್‌ ಕೆಲಸ ಆರಂಭಿಸಲು ಕಂಟ್ರಾಕ್ಟರ್‌ ನಿಂದ ಅರಣ್ಯ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಟ್ರ್ಯಾಪ್‌ನಲ್ಲಿ ಬಲೆಗೆ ಬಿದ್ದಿದ್ದಾರೆ.


ಗುಬ್ಬಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿ ಕೆ.ಎಸ್‌ ಸತೀಶ್‌ಚಂದ್ರ  ಲೋಕಾ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಅಲ್ದೇ ಕಚೇರಿಯ ಹೊರಗುತ್ತಿಗೆ ನೌಕರನಾಗಿರುವ ಕ್ಯಾಂಪ್ ವಾಚರ್ ಶೌಖತ್ ಕೂಡ ಲೋಕಾ ಬಲೆಗೆ ತಗ್ಲಾಕೊಂಡಿದ್ದಾರೆ. ಕಂಟ್ರಾಕ್ಟರ್‌ ಆಗಿರುವ ಬಿ.ಜೆ ಶಿವರಾಜು ಎಂಬುವವರಿಗೆ  ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ 2025-26ನೇ ಸಾಲಿಗೆ ಗುಬ್ಬಿ ಅರಣ್ಯ ವಲಯದಲ್ಲಿ ಸಿಸಿಟಿ ಅಗೆಯುವುದು, ಬದುಗಳ ಮೇಲೆ ಸಸ್ಯಗಳನ್ನು ನೆಡುವುದು ಸೇರಿದಂತೆ ವಿವಿಧ ಕಾಮಗಾರಿಗಳ ಟೆಂಡರ್ ಮಂಜೂರಾಗಿತ್ತು. ಸರ್ಕಾರದ ಆದೇಶದಂತೆ ಕಂಟ್ರಾಕ್ಟರ್‌ ಶಿವರಾಜು ಅವರು ಮಂಜೂರಾದ ಸ್ಥಳಕ್ಕೆ ತೆರಳಿ ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆ. ಆದ್ರೆ ಕೆಲಸ ಮಾಡದಂತೆ ತಡೆದು, ಕಾಮಗಾರಿ ಮಂಜೂರಾಗಿರುವ ಮೊತ್ತದ 30 ಪ್ರತಿಶತ ಹಣ ಅಥವಾ 5 ಲಕ್ಷ ರೂಪಾಯಿ ನೀಡಿದರೆ ಮಾತ್ರ ಕೆಲಸ ಆರಂಭಿಸಲು ಅವಕಾಶ ನೀಡುವುದಾಗಿ ಅರಣ್ಯ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.


ಇನ್ನು ಕಂಟ್ರಾಕ್ಟರ್‌ನಿಂದ ಅರಣ್ಯ ಅಧಿಕಾರಿ 50,000 ಸಾವಿರ ರೂಗಳನ್ನು ಸ್ವೀಕರಿಸಿದ್ರು.  ಇನ್ನು 3 ಲಕ್ಷದ 50 ಸಾವಿರ ರೂಪಾಯಿ ನೀಡುವಂತೆ  ಡಿಮ್ಯಾಂಡ್‌ ಮಾಡಿದ್ದಾರೆ. ಈ ಬಗ್ಗೆ ಕಂಟ್ರಾಕ್ಟರ್‌ ಶಿವರಾಜ್‌ ಲೋಕಾಯುಕ್ತ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಇಂದು ಮಧ್ಯಾಹ್ನ  ಗುಬ್ಬಿಯಲ್ಲಿ ಆರೋಪಿ ಸತೀಶ್‌ಚಂದ್ರ ಸೂಚನೆ ಮೇರೆಗೆ ಅವರ ಕಛೇರಿ ಹೊರಗುತ್ತಿಗೆ ನೌಕರನಾದ ಕ್ಯಾಂಪ್ ವಾಚರ್ ಶೌಖತ್ ರವರು 2 ಲಕ್ಷ ಹಣ ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್‌ ಆಗಿ ತಗ್ಲಾಕೊಂಡಿದ್ದಾರೆ. ಲಂಚದ ಹಣದ ಸಮೇತ ಕ್ಯಾಂಪ್ ವಾಚರ್ ಶೌಖತ್ ಮತ್ತು ಅರಣ್ಯ ಅಧಿಕಾರಿ ಸತೀಶ್‌ಚಂದ್ರರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೊಳಪಡಿಸಿ, ತನಿಖೆ ಕೈಗೊಂಡಿದ್ದಾರೆ.