ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಾದಿಹಳ್ಳಿ ಬಳಿ ಬೈಕ್‌ಗೆ KSRTC ಬಸ್ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. 

ತುಮಕೂರು: ಮದುವೆ ಸಮಾರಂಭ ಮುಗಿಸಿ ಬೈಕ್‌ನಲ್ಲಿ ವಾಪಸ್ ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಮಾದಿಹಳ್ಳಿ ಬಳಿ ನಡೆದಿದೆ.

ಗೆದ್ದಲೆಹಳ್ಳಿ ನಿವಾಸಿ ದಿನೇಶ್ ಅವರ ಪುತ್ರ ಸಂಜು (23) ಹಾಗೂ ಬೈರನಾಯಕನಹಳ್ಳಿ ಗ್ರಾಮದ ಆನಂದ್ ಕುಮಾರ್ ಅವರ ಪುತ್ರ ಹರ್ಷ (23) ಮೃತ ಯುವಕರು.

ಸಂಬಂಧಿಕರ ಮದುವೆ ಮುಗಿಸಿ ಇಬ್ಬರೂ ಬೈಕ್‌ನಲ್ಲಿ ವಾಪಸ್ ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ತಿಪಟೂರು-ಅರಸೀಕೆರೆ ರಸ್ತೆಯ ಮಾದಿಹಳ್ಳಿ ಬಳಿ ಯೂಟರ್ನ್ ತೆಗೆದುಕೊಳ್ಳುತ್ತಿದ್ದಾಗ ಅರಸೀಕೆರೆ ಕಡೆಯಿಂದ ತಿಪಟೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ತಿಪಟೂರು ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.