ತಮಿಳುನಾಡಿಗೆ ಕಾವೇರಿ ನೀರು ನಿರಂತರವಾಗಿ ಹರಿಯುತ್ತಿದ್ದು, ಕೆಆರ್‌ಎಸ್ ಡ್ಯಾಂನಿಂದ 6,634 ಕ್ಯೂಸೆಕ್ ಹೊರಹರಿವು ದಾಖಲಾಗಿದೆ. ಜಲಾಶಯಗಳ ನೀರಿನ ಮಟ್ಟದ ಕುರಿತು ಆತಂಕ ವ್ಯಕ್ತವಾಗಿದೆ.

ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಸರ್ಕಾರ ಹೇಳಿದ್ದರೂ, ಕೆಆರ್‌ಎಸ್ ಡ್ಯಾಂನಿಂದ ಕಾವೇರಿ ನೀರು ನಿರಂತರವಾಗಿ ಹರಿಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೇಮಾವತಿ ಜಲಾಶಯದಿಂದ ಕೆಆರ್‌ಎಸ್‌ಗೆ ನೀರು ಹರಿಸಿರುವುದರಿಂದ ಒಳಹರಿವು ಹೆಚ್ಚಳವಾಗಿದೆ.

ಸದ್ಯ ಕೆಆರ್‌ಎಸ್ ಡ್ಯಾಂಗೆ 4,457 ಕ್ಯೂಸೆಕ್ ಒಳಹರಿವು ಇದ್ದು, 6,634 ಕ್ಯೂಸೆಕ್ ನೀರನ್ನು ಹೊರಹರಿವಿನ ಮೂಲಕ ತಮಿಳುನಾಡಿಗೆ ಬಿಡಲಾಗುತ್ತಿದೆ ಎಂದು ವರದಿಯಾಗಿದೆ.


ಸೆಪ್ಟೆಂಬರ್ 9ರಂದು 15 ದಿನಗಳ ಕಾಲ ನೀರು ಹರಿಸುವಂತೆ ಸಿಡಬ್ಲ್ಯೂಎಂಎ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಕೋರ್ಟ್ ಮೊರೆ ಹೋಗುವುದಾಗಿ ಸರ್ಕಾರ ಹೇಳಿತ್ತು. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಇನ್ನೂ ನಡೆದಿಲ್ಲ ಎನ್ನಲಾಗಿದ್ದು, ಒಂದೆರಡು ದಿನ ಹೊರತುಪಡಿಸಿ ತಮಿಳುನಾಡಿಗೆ ಪ್ರತಿದಿನ ನೀರು ಹರಿಯುತ್ತಿದೆ.


ಇದೇ ರೀತಿ ನೀರು ಹರಿವು ಮುಂದುವರಿದರೆ ಕೆಆರ್‌ಎಸ್ ಮಾತ್ರವಲ್ಲದೆ ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳ ನೀರಿನ ಮಟ್ಟವೂ ಮತ್ತಷ್ಟು ಕುಸಿಯುವ ಆತಂಕ ವ್ಯಕ್ತವಾಗಿದೆ.

124.80 ಅಡಿ ಗರಿಷ್ಠ ಮಟ್ಟದ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ 105.86 ಅಡಿ ನೀರಿದ್ದು, 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ 27.761 ಟಿಎಂಸಿ ನೀರು ಸಂಗ್ರಹವಾಗಿದೆ.