Koppal ಜಿಲ್ಲೆಯ ಗಂಗಾವತಿ ಹಾಗೂ ಕುಷ್ಟಗಿ KSRTC ಡಿಪೋಗಳಲ್ಲಿ 2–3 ದಿನಗಳಿಂದ ಡೀಸೆಲ್ ಕೊರತೆ ಎದುರಾಗಿದೆ ಎನ್ನಲಾಗಿದೆ.
Koppal : ಜಿಲ್ಲೆಯ ಗಂಗಾವತಿ ಹಾಗೂ ಕುಷ್ಟಗಿ KSRTC ಡಿಪೋಗಳಲ್ಲಿ ಕಳೆದ 2–3 ದಿನಗಳಿಂದ ಡೀಸೆಲ್ ಕೊರತೆ ಎದುರಾಗಿದೆ ಎನ್ನಲಾಗಿದ್ದು, ಹಲವು ಬಸ್ಗಳು ಡಿಪೋದಲ್ಲೇ ನಿಲ್ಲುವಂತಾಗಿದೆ.
ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ದೂರದ ಮಾರ್ಗಗಳ ಕೆಲವು ಬಸ್ಗಳ ಸಂಚಾರ ಸ್ಥಗಿತಗೊಂಡಿದೆ ಎನ್ನಲಾಗಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು ಹಾಗೂ ರೈತರು ಬಸ್ಗಳಿಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ಗಳಿಲ್ಲದ ಕಾರಣ ಅನಿವಾರ್ಯವಾಗಿ ಖಾಸಗಿ ವಾಹನ ಹಾಗೂ ಆಟೋಗಳನ್ನು ಅವಲಂಬಿಸಬೇಕಾಗಿದ್ದು, ಪ್ರಯಾಣಿಕರಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗಿದೆ.
ಇನ್ನು ಡೀಸೆಲ್ ಕೊರತೆಗೆ ಸರ್ಕಾರದ ಆರ್ಥಿಕ ನಿರ್ವಹಣೆ ಹಾಗೂ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಕುಷ್ಟಗಿ ಬಸ್ ನಿಲ್ದಾಣದ ಎದುರು ಖಾಲಿ ಕೊಡ ಹಿಡಿದು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಡೀಸೆಲ್ ಪೂರೈಕೆ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ ಸ್ಥಗಿತಗೊಂಡಿರುವ ಬಸ್ ಸಂಚಾರವನ್ನು ಪುನರಾರಂಭಿಸಬೇಕು ಎಂದು ಪ್ರಯಾಣಿಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.