Kolar ಜಿಲ್ಲೆಯ ಕೆಜಿಎಫ್ ತಾಲೂಕಿನ ದೊಡ್ಡಕಾರಿ ಬಳಿ ಟೊಯೋಟಾ ಕಾರು ಡಿವೈಡರ್ಗೆ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ಒಂದೇ ಕುಟುಂಬದ ಸದಸ್ಯರಿದ್ದ ಕಾರು ಡಿವೈಡರ್ಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ದೊಡ್ಡಕಾರಿ ಬಳಿ ನಡೆದಿದೆ..
ಮೃತರನ್ನು ಬೆಂಗಳೂರಿನ ವಿದ್ಯಾರಣ್ಯಪುರ ಮೂಲದ ಶಾರದಮ್ಮ (70), ದೀಕ್ಷಿತ್ (25), ದೇವೇಂದ್ರ ಕುಮಾರ್ (41) ಹಾಗೂ ಜಿಷ್ಣು (13) ಎಂದು ಗುರುತಿಸಲಾಗಿದೆ.
ಕುಟುಂಬಸ್ಥರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ದೊಡ್ಡಕಾರಿ ಬಳಿ ಅವರು ಪ್ರಯಾಣಿಸುತ್ತಿದ್ದ ಟೊಯೋಟಾ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ವಿಕಾಸ್, ನೀತು ಹಾಗೂ ಆದ್ವಿಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಂಗಾರಪೇಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ತಿರುಪತಿ ದರ್ಶನ ಮುಗಿಸಿ ಸಂತೋಷದಿಂದ ಮನೆಗೆ ಮರಳುತ್ತಿದ್ದ ಕುಟುಂಬಕ್ಕೆ ಸಂಭವಿಸಿದ ಈ ದುರ್ಘಟನೆ ಇದೀಗ ಇಡೀ ಕುಟುಂಬವನ್ನೇ ದುಃಖದ ಸಾಗರದಲ್ಲಿ ಮುಳುಗಿಸಿದೆ.