ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಅತ್ತಿಮಂಗಲ ವ್ಯಾಪ್ತಿಯಲ್ಲಿ ಬೈಕ್ನಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಒಂಟಿ ಸಲಗ ದಾಳಿ ನಡೆಸಿದೆ.
ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಬೈಕ್ನಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಒಂಟಿ ಸಲಗ ದಾಳಿ ನಡೆಸಿರುವ ಘಟನೆ ಕುಶಾಲನಗರ ತಾಲೂಕಿನ ಅತ್ತಿಮಂಗಲ ವ್ಯಾಪ್ತಿಯಲ್ಲಿ ನಡೆದಿದೆ.
ಗಾಯಗೊಂಡವರನ್ನು 60 ವರ್ಷದ ಸುಬ್ರಹ್ಮಣಿ ಹಾಗೂ 53 ವರ್ಷದ ಉಮೇಶ್ ಎಂದು ಗುರುತಿಸಲಾಗಿದೆ. ಇಬ್ಬರೂ ಬೈಕ್ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ರಸ್ತೆಗೇ ಏಕಾಏಕಿ ಬಂದ ಕಾಡಾನೆ ದಾಳಿ ನಡೆಸಿದೆ.
ರಸ್ತೆ ಬದಿಯಲ್ಲಿ ದಟ್ಟವಾಗಿ ಬೆಳೆದಿದ್ದ ಗಿಡಗಂಟಿ ಹಾಗೂ ಪೊದೆಗಳ ನಡುವೆ ಕಾಡಾನೆ ಅಡಗಿಕೊಂಡಿದ್ದರಿಂದ, ಬೈಕ್ನಲ್ಲಿ ಬರುತ್ತಿದ್ದ ಕಾರ್ಮಿಕರಿಗೆ ಆನೆ ಕಾಣಿಸಿರಲಿಲ್ಲ ಎಂದು ತಿಳಿದುಬಂದಿದೆ.
ಕಾರ್ಮಿಕರು ಆನೆಯ ಸಮೀಪಕ್ಕೆ ಬರುತ್ತಿದ್ದಂತೆ, ಏಕಾಏಕಿ ರಸ್ತೆಗಿಳಿದ ಸಲಗ ದಾಳಿ ನಡೆಸಿದೆ. ಕ್ಷಣಮಾತ್ರದಲ್ಲಿ ನಡೆದ ದಾಳಿಯಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಕೂಡಲೇ ಸಿದ್ಧಾಪುರ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಸ್ತೆ ಬದಿಯ ಪೊದೆಗಳಿಂದ ಆತಂಕ
ರಸ್ತೆ ಬದಿಯಲ್ಲಿ ಗಿಡಗಂಟಿ ಹಾಗೂ ಪೊದೆಗಳು ದಟ್ಟವಾಗಿ ಬೆಳೆದಿರುವುದರಿಂದ ಕಾಡಾನೆಗಳು ಅಡಗಿಕೊಳ್ಳಲು ಅನುಕೂಲವಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ಅಪಾಯ ಎದುರಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಖಾಸಗಿ ತೋಟಗಳ ಗಡಿ ಭಾಗದಲ್ಲೂ ಗಿಡಗಂಟಿಗಳು ದಟ್ಟವಾಗಿ ಬೆಳೆದಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೇ ರಸ್ತೆಯಲ್ಲಿ ಆಗಾಗ್ಗೆ ಕಾಡಾನೆಗಳ ಓಡಾಟ ಕಂಡುಬರುತ್ತಿದ್ದು, ವಾಹನ ಸವಾರರು ಆತಂಕದಿಂದಲೇ ಸಂಚರಿಸುವಂತಾಗಿದೆ.
ರಸ್ತೆ ದುರಸ್ತಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದರೂ, ರಸ್ತೆ ಎರಡೂ ಬದಿಯಲ್ಲಿರುವ ಕಾಡು, ಪೊದೆ ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಿ ವಾಹನ ಸವಾರರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಸಮಾಧಾನ ಸ್ಥಳೀಯರಿಂದ ವ್ಯಕ್ತವಾಗಿದೆ.