ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಕೆ.ಎನ್. ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಾ. ಜಿ. ಪರಮೇಶ್ವರ್ ಹಾಗೂ ಬಿ.ಕೆ. ಹರಿಪ್ರಸಾದ್ ಭೇಟಿ ಬಳಿಕ ರಾಜಣ್ಣ ನೀಡಿದ ಹೇಳಿಕೆ ಇದೀಗ ಗಮನ ಸೆಳೆದಿದೆ.
ಅಧಿಕಾರ ಅನ್ನೋದು ವಿಷವಿದ್ದಂತೆ..! ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್. ರಾಜಣ್ಣ ಮತ್ತೆ ಸ್ವಪಕ್ಷೀಯರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಕೆ.ಎನ್. ರಾಜಣ್ಣ ಅವರು ಡಿಸಿಎಂ ಡಾ. ಜಿ. ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಸದಾಶಿವನಗರದಲ್ಲಿರುವ ಡಾ. ಜಿ. ಪರಮೇಶ್ವರ್ ಅವರ ನಿವಾಸಕ್ಕೆ ತೆರಳಿದ ರಾಜಣ್ಣ, ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಬಳಿಕ ಬಿ.ಕೆ. ಹರಿಪ್ರಸಾದ್ ಅವರ ನಿವಾಸಕ್ಕೂ ತೆರಳಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, ಅಪೆಕ್ಸ್ ಬ್ಯಾಂಕ್ನಲ್ಲಿ ರೈತರ ನೆರವಿಗೆ ಸರ್ಕಾರದ ಸಹಕಾರ ಅತ್ಯಂತ ಮುಖ್ಯ. ಸರ್ಕಾರದ ಪರ ಇರುವವರು ಅಧಿಕಾರದಲ್ಲಿದ್ದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ತಾವು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾಗಿ ಹೇಳಿದ್ದಾರೆ.
ತಾವು ಸ್ಪರ್ಧೆ ಮಾಡಿದ್ದರೆ ಗೆಲ್ಲುತ್ತಿದ್ದೆ. ಸಿದ್ದರಾಮಯ್ಯ ಅವರು ತಮ್ಮ ಪರವಾಗಿಯೇ ಇದ್ದರು. ಆದರೆ ಈ ವಿಚಾರದಲ್ಲಿ ಅವರ ಮಾತು ನಡೆದಿಲ್ಲ. ರಾಜ್ಯ ನಾಯಕರಿಂದಲೋ ಅಥವಾ ಎಐಸಿಸಿ ನಾಯಕರಿಂದಲೋ ಎಲ್ಲಿ ಹಿನ್ನಡೆಯಾಯಿತೋ ಗೊತ್ತಿಲ್ಲ ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಎರಡೂವರೆ ವರ್ಷಗಳ ಬಳಿಕವೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ತಾನು ಆಕಾಂಕ್ಷಿಯೂ ಅಲ್ಲ, ಸ್ಪರ್ಧಿಯೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾಯಕರ ಭೇಟಿಯ ವೇಳೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಮುಂದಿನ ಚುನಾವಣೆಯಲ್ಲಿ ವಿಧಾನಸಭೆ ಬದಲಾಗಿ ಲೋಕಸಭೆಗೆ ಸ್ಪರ್ಧಿಸುವುದಾಗಿ ಹೇಳಿದ್ದು, ಇದಕ್ಕೆ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ರಾಜಣ್ಣ ತಿಳಿಸಿದ್ದಾರೆ.
ಅಲ್ಲದೆ 35 ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಮಹಿಳೆಯರಿಗೆ ಸ್ಥಾನ ಸಿಗದಿರುವ ಬಗ್ಗೆಯೂ ಸುರ್ಜೇವಾಲಾ ಹಾಗೂ ವೇಣುಗೋಪಾಲ್ ಅವರೊಂದಿಗೆ ಚರ್ಚಿಸುವಂತೆ ತಿಳಿಸಿರುವುದಾಗಿ ರಾಜಣ್ಣ ಹೇಳಿದ್ದಾರೆ.
ಅಪೆಕ್ಸ್ ಬ್ಯಾಂಕ್ ವಿಚಾರದ ಬೆನ್ನಲ್ಲೇ ರಾಜಣ್ಣ ನೀಡಿರುವ ಹೇಳಿಕೆಗಳು ಕಾಂಗ್ರೆಸ್ ವಲಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿವೆ.