KN RAJANNAಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ತಪ್ಪಿದ್ದಕ್ಕೆ ಪುತ್ರ ರಾಜೇಂದ್ರ ಅಸಮಾಧಾನ | ಕಾಂಗ್ರೆಸ್‌ಗೆ ಎಚ್ಚರಿಕೆ


ತುಮಕೂರು: ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಕಾಂಗ್ರೆಸ್ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ತಮ್ಮ ತಂದೆಯ ರಾಜಕೀಯ ಬೆಳವಣಿಗೆಯನ್ನು ಸಹಿಸದೆ ಪಕ್ಷದೊಳಗೆ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ರಾಜೇಂದ್ರ ಆರೋಪಿಸಿದ್ದಾರೆ. ಸಚಿವ ಸ್ಥಾನದಿಂದ ರಾಜಣ್ಣ ಅವರನ್ನು ಕೈಬಿಟ್ಟ ಬಳಿಕ, ನೂತನ ಸಂಪುಟ ರಚನೆಯಲ್ಲೂ ಅವಕಾಶ ಸಿಗಲಿಲ್ಲ. ಬಳಿಕ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ನೀಡುವ ಭರವಸೆಯೂ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಕೆಲವರ ಸ್ವಜನಪಕ್ಷಪಾತ ಹಾಗೂ ಕಾಣದ ಕೈಗಳ ಪಿತೂರಿಯಿಂದಾಗಿ ರಾಜಣ್ಣ ಅವರಿಗೆ ಹುದ್ದೆ ತಪ್ಪಿದೆ ಎಂದು ಆರೋಪಿಸಿದ ರಾಜೇಂದ್ರ, ಪಕ್ಷದಲ್ಲಿ ರಾಜಣ್ಣ ಅವರನ್ನು ಕಡೆಗಣಿಸಿದರೆ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ಭಾರಿ ಹಿನ್ನಡೆಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಈ ಹಿಂದೆ ರಾಜಣ್ಣ ಅವರನ್ನು ಕಡೆಗಣಿಸಿದ ಪರಿಣಾಮ ಕಾಂಗ್ರೆಸ್ ನಷ್ಟ ಅನುಭವಿಸಿತ್ತು. ಇದೇ ಪರಿಸ್ಥಿತಿ ಮುಂದುವರಿದರೆ ಮತ್ತೆ ಗಂಭೀರ ಪರಿಣಾಮ ಎದುರಾಗಬಹುದು ಎಂದು ಅವರು ಹೇಳಿದ್ದಾರೆ.


ಮಾಜಿ ಸಚಿವ ಬಿ. ನಾಗೇಂದ್ರ ಅವರ ತೆರವಾದ ಸಚಿವ ಸ್ಥಾನವನ್ನು ರಾಜಣ್ಣ ಅವರಿಗೆ ನೀಡಬೇಕು ಎಂದು ನಾವು ಕೇಳುತ್ತಿಲ್ಲ. ಆ ಸ್ಥಾನವನ್ನು ಸಮುದಾಯದ ಇತರ ಅರ್ಹ ಎಸ್‌ಟಿ ನಾಯಕರಿಗೆ ನೀಡಬಹುದು ಎಂದು ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.

ಇನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವಾಸಕ್ಕೆ ನೀಡಿದ ಭೇಟಿ ಕೇವಲ ಸೌಹಾರ್ದಯುತ ಭೇಟಿಯಾಗಿದ್ದು, ಅದಕ್ಕೆ ಯಾವುದೇ ರಾಜಕೀಯ ಬಣ್ಣ ಕಟ್ಟುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.