ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಇಂದು (ಸೆ.2) ಹುಟ್ಟುಹಬ್ಬದ ಸಂಭ್ರಮ. 53 ವಸಂತಗಳನ್ನು ಪೂರೈಸಿ 54ನೇ ವರ್ಷಕ್ಕೆ ಕಾಲಿಟ್ಟಿರುವ ಕಿಚ್ಚ ಸುದೀಪ್, ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಬದಲಿಗೆ ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
ನಿರೀಕ್ಷೆಯಂತೆ ಸುದೀಪ್ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಚಿತ್ರದ ಘೋಷಣೆಯಾಗಿದೆ. ಆಕರ್ಷಕ ಟೀಸರ್ ಮೂಲಕ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲಾಗಿದ್ದು, ‘ದೇವರಾಯ’ ಎಂಬ ಟೈಟಲ್ ಭಾರೀ ಕುತೂಹಲ ಮೂಡಿಸಿದೆ.
ಶ್ರೀ ಕೃಷ್ಣದೇವರಾಯನಾಗಿ ಕಿಚ್ಚ ಸುದೀಪ್..!!
‘ದೇವರಾಯ’ ಚಿತ್ರವು ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಅರಸ ಶ್ರೀ ಕೃಷ್ಣದೇವರಾಯ ಅವರ ಜೀವನಾಧಾರಿತ ಐತಿಹಾಸಿಕ ಚಿತ್ರವಾಗಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಶ್ರೀ ಕೃಷ್ಣದೇವರಾಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿಜಯನಗರ ಸಾಮ್ರಾಜ್ಯವನ್ನು ಸುವರ್ಣಯುಗದತ್ತ ಕೊಂಡೊಯ್ದ ಶ್ರೀ ಕೃಷ್ಣದೇವರಾಯರು ತಮ್ಮ ಸಾಹಸ, ಚಾಣಾಕ್ಷ ಆಡಳಿತ ಹಾಗೂ ಸಾಹಿತ್ಯ ಮತ್ತು ಕಲೆಗಳ ಪೋಷಣೆಗೆ ಹೆಸರಾಗಿದ್ದರು. ಇಂತಹ ಐತಿಹಾಸಿಕ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಪ್ರಿಯಾ ಸುದೀಪ್ ನಿರ್ಮಾಣ ಸಂಸ್ಥೆಯಿಂದ ಚಿತ್ರ..
ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರ ಒಡೆತನದ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಹಾಗೂ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಜಂಟಿಯಾಗಿ ನಿರ್ಮಿಸುತ್ತಿವೆ.
ಪ್ರಿಯಾ ಸುದೀಪ್ ಅವರು ಚಿತ್ರವನ್ನು ಅರ್ಪಿಸುತ್ತಿದ್ದು, ಟಿ.ಜಿ. ವಿಶ್ವಪ್ರಸಾದ್ ಹಾಗೂ ಕೃತಿ ಪ್ರಸಾದ್ ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಚಿತ್ರದ ಟೈಟಲ್ ಮತ್ತು ಪೋಸ್ಟರ್ ಮೂಲಕವೇ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರತಂಡ, ಸಿನಿಮಾವನ್ನು ನಿರ್ದೇಶಿಸಲಿರುವ ನಿರ್ದೇಶಕರ ಹೆಸರನ್ನು ಮಾತ್ರ ಸದ್ಯಕ್ಕೆ ಗೌಪ್ಯವಾಗಿಟ್ಟಿದೆ.
ಆದರೆ ‘ದೇವರಾಯ’ ಚಿತ್ರಕ್ಕೆ ತೆಲುಗು ಮೂಲದ ನಿರ್ದೇಶಕರೊಬ್ಬರು ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿಬರುತ್ತಿವೆ.
2027ರ ಡಿಸೆಂಬರ್ನಲ್ಲಿ ತೆರೆಗೆ?
‘ದೇವರಾಯ’ ಒಂದು ಬೃಹತ್ ಐತಿಹಾಸಿಕ ಚಿತ್ರವಾಗಿರುವುದರಿಂದ ಭಾರೀ ಪ್ರಮಾಣದ ಚಿತ್ರೀಕರಣ, ಸೆಟ್ಗಳು ಹಾಗೂ ತಾಂತ್ರಿಕ ಸಿದ್ಧತೆಗಳ ಅಗತ್ಯವಿದೆ. ಹೀಗಾಗಿ ಚಿತ್ರತಂಡವು ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿ 2027ರ ಡಿಸೆಂಬರ್ನಲ್ಲಿ ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.
ಟೈಟಲ್ ಘೋಷಣೆಯೊಂದಿಗೆ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರುವ ‘ದೇವರಾಯ’ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಶ್ರೀ ಕೃಷ್ಣದೇವರಾಯನ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.