ರಾಮನಗರ ಜಿಲ್ಲೆಯ ಕನಕಪುರ ಟೌನ್‌ನ ವಾಣಿ ಟಾಕೀಸ್ ಬಳಿ ಬೈಕ್ ಏಕಾಏಕಿ ಅಡ್ಡಬಂದ ಪರಿಣಾಮ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿಯಾಗಿದೆ. 

ಏಕಾಏಕಿ ಬೈಕ್ ಅಡ್ಡಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ರಭಸವಾಗಿ ಡಿಕ್ಕಿ ಹೊಡೆದ ಘಟನೆ ಕನಕಪುರ ಟೌನ್‌ನ ವಾಣಿ ಟಾಕೀಸ್ ಬಳಿ ನಡೆದಿದೆ.

ತಡರಾತ್ರಿ ಕನಕಪುರ–ಬೆಂಗಳೂರು ರಸ್ತೆಯಲ್ಲಿ ಕಾರು ಸಂಚರಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಈ ವೇಳೆ ಏಕಾಏಕಿ ಬೈಕ್‌ವೊಂದು ಕಾರಿನ ಮುಂದೆ ಅಡ್ಡಬಂದಿದೆ ಎನ್ನಲಾಗಿದೆ.


ಬೈಕ್ ಸವಾರನನ್ನು ರಕ್ಷಿಸಲು ಪ್ರಯತ್ನಿಸಿದ ಕಾರು ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದು, ರಸ್ತೆ ಬದಿಯಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಜಖಂಗೊಂಡಿದ್ದು, ಶಾರ್ಟ್ ಸರ್ಕ್ಯೂಟ್ ಕೂಡ ಸಂಭವಿಸಿದೆ. ಅದೃಷ್ಟವಶಾತ್ ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆಯುವ ಭಯಾನಕ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಕನಕಪುರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.